​ಹುಬ್ಬಳ್ಳಿ ದೌರ್ಜನ್ಯ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ; ಕಾಂಗ್ರೆಸ್ ನಾಯಕಿ ಸೇರಿ 9 ಮಂದಿ ವಿರುದ್ಧ FIR

Spread the love

ಹುಬ್ಬಳ್ಳಿ/ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯ ಬಂಧನದ ವೇಳೆ ನಡೆದಿದೆ ಎನ್ನಲಾದ ಅಮಾನವೀಯ ಹಲ್ಲೆ ಮತ್ತು ವಿವಸ್ತ್ರಗೊಳಿಸಿದ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಈ ಗಂಭೀರ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗವು (NCW) ಸ್ವಯಂ ಪ್ರೇರಿತವಾಗಿ (Suo Motu) ದಾಖಲಿಸಿಕೊಂಡ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೇರಿದಂತೆ ಒಟ್ಟು 9 ಜನರ ವಿರುದ್ಧ ಕೊಲೆ ಯತ್ನ ಹಾಗೂ ಗಲಭೆ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಪಾಲಿಕೆ ಸದಸ್ಯೆ ಸೇರಿ 9 ಮಂದಿ ವಿರುದ್ಧ ಕೇಸ್

​ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸುವರ್ಣಾ ಕಲ್ಲಕುಂಟ ಹಾಗೂ ಡೇವಿಡ್ ಸೇರಿದಂತೆ ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರ ಮೇಲೆ ಕೊಲೆ ಯತ್ನ, ಜೀವ ಬೆದರಿಕೆ, ಗಲಭೆ ಸೃಷ್ಟಿ ಸೇರಿದಂತೆ ವಿವಿಧ ಗಂಭೀರ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ಜಡಿಯಲಾಗಿದೆ.

ಮಹಿಳೆಯ ಘನತೆಗೆ ಧಕ್ಕೆ: ರಾಷ್ಟ್ರೀಯ ಮಹಿಳಾ ಆಯೋಗದ ಆಕ್ರೋಶ

​ಘಟನೆಯ ಆಘಾತಕಾರಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾರ್ಯಪ್ರವೃತ್ತವಾಗಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ವಿಜಯಾ ರಹಾಟ್ಕರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP) ಪತ್ರ ಬರೆದಿದ್ದಾರೆ. “ಬಂಧನದ ನೆಪದಲ್ಲಿ ಮಹಿಳೆಯ ಬಟ್ಟೆ ಹರಿದಿರುವುದು ಮತ್ತು ಹಲ್ಲೆ ಮಾಡಿರುವುದು ಮಹಿಳೆಯ ಘನತೆ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ತೀವ್ರ ಉಲ್ಲಂಘನೆಯಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.

ಡಿಜಿಪಿಗೆ ಆಯೋಗದ ಖಡಕ್ ಸೂಚನೆಗಳು:

  • ಕಾಲಮಿತಿಯ ತನಿಖೆ: ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು.
  • ಅಧಿಕಾರಿಗಳ ಮೇಲೆ ಕ್ರಮ: ಮಹಿಳೆಯ ಜತೆಗೆ ಅಸಭ್ಯವಾಗಿ ವರ್ತಿಸಿದ ಮತ್ತು ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಇಲಾಖಾ ಹಾಗೂ ಕ್ರಿಮಿನಲ್ ಕ್ರಮ ಜರುಗಿಸಬೇಕು.
  • ಸಂತ್ರಸ್ತೆಗೆ ನೆರವು: ಸಂತ್ರಸ್ತ ಮಹಿಳೆಗೆ ತಕ್ಷಣವೇ ಅಗತ್ಯ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಬೆಂಬಲ ಮತ್ತು ಕಾನೂನುಬದ್ಧ ಪರಿಹಾರ ಒದಗಿಸಬೇಕು.
  • 5 ದಿನಗಳ ಗಡುವು: ಪ್ರಕರಣದ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ 5 ದಿನಗಳ ಒಳಗಾಗಿ ಸವಿಸ್ತಾರವಾದ ವರದಿಯನ್ನು (ATR) ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

​ಪೊಲೀಸ್ ಇಲಾಖೆಯ ನಡೆ ಮತ್ತು ಕಾಂಗ್ರೆಸ್ ನಾಯಕಿಯ ಶಾಮೀಲಾತಿಯ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರಕರಣವು ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *