​ಮಾರ್ಕೋನಹಳ್ಳಿ ಡ್ಯಾಂನಲ್ಲಿ ಭೀಕರ ದುರಂತ: ಈಜಲು ಹೋಗಿ ಆರು ಜನ ಜಲಸಮಾಧಿ

Spread the love

ತುಮಕೂರು/ಕುಣಿಗಲ್: ಜಿಲ್ಲೆಯ ಕುಣಿಗಲ್ ತಾಲ್ಲೂಕು ಯಡಿಯೂರು ಸಮೀಪದ ಮಾರ್ಕೋನಹಳ್ಳಿ ಅಣೆಕಟ್ಟು (ಡ್ಯಾಂ) ನಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ಆರು ಜನ ನೀರು ಪಾಲಾಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ. ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಡ್ಯಾಂನಲ್ಲಿ ಒಟ್ಟು ಎಂಟು ಜನ ಈಜಲು ಹೋಗಿದ್ದಾಗ ದುರಂತ ಸಂಭವಿಸಿದೆ.

​ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಎಂದು ತಿಳಿದುಬಂದಿದೆ. ತಬಾಸುಮ್ (45), ಶಬಾನ (44), ಮಿಫ್ರಾ (4), ಮಹಿಬ್ (1), ಸಾಜಿಯಾ ಮತ್ತು ಅರ್ಬಿನ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಈ ಎಲ್ಲರೂ ತುಮಕೂರು ನಗರದ ಬಿಜಿ ಪಾಳ್ಯದವರು ಎಂದು ಮಾಹಿತಿ ಲಭ್ಯವಾಗಿದೆ.

​ಸ್ಥಳೀಯರ ಸಹಾಯದಿಂದ ಸಾಜಿಯಾ ಮತ್ತು ಅರ್ಬಿನ್ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಉಳಿದವರ ಮೃತದೇಹಗಳಿಗಾಗಿ ಪೊಲೀಸರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯ ಮುಂದುವರಿದಿದೆ.

​ಘಟನಾ ಸ್ಥಳಕ್ಕೆ ಹುಲಿಯೂರು ದುರ್ಗ ಪೊಲೀಸರು ಹಾಗೂ ಅಮೃತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *