​ಚಿರ್ತದುರ್ಗ: ಹಿರಿಯೂರು ಸಮೀಪ ಭೀಕರ ರಸ್ತೆ ದುರಂತ: ಲಾರಿ-ಬಸ್ ಮುಖಾಮುಖಿ ಡಿಕ್ಕಿ, ಬೆಂಕಿಗೆ ಆಹುತಿಯಾದ 12 ಪ್ರಯಾಣಿಕರು

Spread the love

ಹಿರಿಯೂರು ಸಮೀಪ ಭೀಕರ ರಸ್ತೆ ದುರಂತ: ಲಾರಿ-ಬಸ್ ಮುಖಾಮುಖಿ ಡಿಕ್ಕಿ, ಬೆಂಕಿಗೆ ಆಹುತಿಯಾದ 12 ಪ್ರಯಾಣಿಕರು

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48ರ ಹಿರಿಯೂರು ತಾಲ್ಲೂಕಿನ ಜವರಗೊಂಡನಹಳ್ಳಿ ಬಳಿ ಗುರುವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಬಸ್ ಸಂಪೂರ್ಣ ಹೊತ್ತಿ ಉರಿದಿದ್ದು, ಕನಿಷ್ಠ 12 ಮಂದಿ ಸಜೀವ ದಹನಗೊಂಡಿದ್ದಾರೆ. ಅಪಘಾತದಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಘಟನೆಯ ವಿವರ:

ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ, ಹಿರಿಯೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಬಂದು ಮುಖಾಮುಖಿ ಡಿಕ್ಕಿ ಹೊಡೆದಿದೆ. ನಸುಕಿನ 2 ಗಂಟೆಯ ಸುಮಾರಿಗೆ ನಡೆದ ಈ ಡಿಕ್ಕಿಯ ರಭಸಕ್ಕೆ ಬಸ್ಸಿನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಕ್ಷಣಾರ್ಧದಲ್ಲಿ ಬೆಂಕಿ ಇಡೀ ಬಸ್ಸನ್ನು ಆವರಿಸಿಕೊಂಡಿದೆ. ನಿದ್ರೆಯಲ್ಲಿದ್ದ ಪ್ರಯಾಣಿಕರು ಏನು ನಡೆಯುತ್ತಿದೆ ಎಂದು ತಿಳಿಯುವ ಮೊದಲೇ ಬೆಂಕಿಯ ಜ್ವಾಲೆಗೆ ಸಿಲುಕಿದ್ದಾರೆ. ಲಾರಿ ಚಾಲಕ ಕುಲದೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಸ್ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಕೆಲ ಪ್ರಯಾಣಿಕರು ಕಿಟಕಿಯಿಂದ ಹೊರಜಿಗಿದು ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಯಾಣಿಕರ ವಿವರ:

ದುರಂತಕ್ಕೀಡಾದ ಬಸ್ಸಿನಲ್ಲಿ ಒಟ್ಟು 31 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಇವರಲ್ಲಿ ಗೋಕರ್ಣದ 25 ಮಂದಿ, ಕುಮಟಾದ ಇಬ್ಬರು ಹಾಗೂ ಶಿವಮೊಗ್ಗದ ಇಬ್ಬರು ಪ್ರಯಾಣಿಕರಿದ್ದರು. ಬುಕ್ಕಿಂಗ್ ದಾಖಲೆಗಳ ಪ್ರಕಾರ ಮಂಜುನಾಥ್, ಸಂಧ್ಯಾ, ಶಶಾಂಕ್, ದಿಲೀಪ್, ಪ್ರೀತೀಶ್ವರನ್, ಬಿಂದು, ಕವಿತಾ, ಅನಿರುದ್ ಬ್ಯಾನರ್ಜಿ, ಅಮೃತಾ, ಇಶಾ, ಸೂರಜ್, ಮಾನಸ, ಮಿಲನಾ, ಹೇಮರಾಜ್ ಕುಮಾರ್, ಕಲ್ಪನಾ ಪ್ರಜಾಪತಿ ಸೇರಿದಂತೆ ಹಲವರು ಪ್ರಯಾಣಿಸುತ್ತಿದ್ದರು. ಸದ್ಯ ಗಾಯಾಳುಗಳನ್ನು ಹಿರಿಯೂರು ಹಾಗೂ ಚಿತ್ರದುರ್ಗದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್:

ಅಪಘಾತದ ತೀವ್ರತೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 30 ಕಿ.ಮೀ ವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಿರಾದಿಂದ ಹಿರಿಯೂರಿನವರೆಗೆ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರದುರ್ಗ ಎಸ್‌ಪಿ ರಂಜಿತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸುಟ್ಟ ಕರಕಲಾಗಿರುವ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *