
ಹುಬ್ಬಳ್ಳಿ: ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಷ್ಟಾಚಾರ ಪಾಲನೆ ಹಾಗೂ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಬೆಳಗಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಾಗರಾಜ ಗಿರಿಯಪ್ಪನವರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ. ಪ್ರಕರಣದ ಗಂಭೀರತೆಯ ನಡುವೆಯೂ ಅಧಿಕಾರಿಗಳು ನಿಯಮಾನುಸಾರ ನಡೆದುಕೊಳ್ಳದ ಕಾರಣ ಈ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಅಮಾನತಿಗೆ ಕಾರಣಗಳೇನು?:
ಮರ್ಯಾದೆಗೇಡು ಹತ್ಯೆಗೀಡಾದ ಮಾನ್ಯಾ ಅವರ ಶವ ಸಂಸ್ಕಾರದ ಸಂದರ್ಭದಲ್ಲಿ ಪಿಡಿಒ ನಾಗರಾಜ ಅವರು ತೀವ್ರ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯರ ಸಭೆ ಕರೆದು ಕೈಗೊಂಡ ಕ್ರಮಗಳ ಕುರಿತು ಠರಾವು ಪಾಸು ಮಾಡದಿರುವುದು, ಶವ ಸಂಸ್ಕಾರಕ್ಕೆ ಮುನ್ನ ನಡೆದ ಸಮಾಲೋಚನಾ ಸಭೆಗೆ ಗೈರು ಹಾಜರಾಗಿರುವುದು ಹಾಗೂ ಶವ ಸಂಸ್ಕಾರದ ವೇಳೆ ಪೊಲೀಸರು ಪಂಚಾಯಿತಿ ಸಿಬ್ಬಂದಿಯ ನೆರವು ಕೋರಿದಾಗ ಸರಿಯಾಗಿ ಸ್ಪಂದಿಸದಿರುವುದು ಅಮಾನತು ಆದೇಶದಲ್ಲಿ ಉಲ್ಲೇಖವಾಗಿರುವ ಪ್ರಮುಖ ಅಂಶಗಳಾಗಿವೆ.
ಸರ್ಕಾರಿ ನಿಯಮಾವಳಿ ಮತ್ತು ಶಿಷ್ಟಾಚಾರಗಳನ್ನು ಪಾಲಿಸುವಲ್ಲಿ ವಿಫಲರಾಗಿ, ಕರ್ತವ್ಯದ ಅವಧಿಯಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸಿರುವುದು ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕರ್ತವ್ಯ ಲೋಪದ ಆರೋಪದ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ಟೆಬಲ್ಗಳನ್ನು ಸಹ ಅಮಾನತು ಮಾಡಲಾಗಿತ್ತು. ಪ್ರಸ್ತುತ ಪಿಡಿಒ ಅಮಾನತು ಪ್ರಕರಣವು ಸರ್ಕಾರಿ ವಲಯದಲ್ಲಿ ಸಂಚಲನ ಮೂಡಿಸಿದೆ.

