ಡಿ.ಜೆ. ನಿಷೇಧಕ್ಕೆ ಮುಸ್ಲಿಂ ಸಮುದಾಯದ ಐತಿಹಾಸಿಕ ನಿರ್ಣಯ: ಕುಂದಗೋಳದಲ್ಲಿ ಡಿ.ಜೆ. ರಹಿತ ಈದ್ ಮಿಲಾದ್ ಆಚರಣೆ

Spread the love

ಕುಂದಗೋಳ (ಧಾರವಾಡ): ಗಣೇಶೋತ್ಸವ ಸೇರಿದಂತೆ ಧಾರ್ಮಿಕ ಹಬ್ಬಗಳಲ್ಲಿ ಡಿ.ಜೆ. (ಡಿಸ್ಕ್ ಜಾಕಿ) ಬಳಕೆಯಿಂದಾಗುವ ಅನಾಹುತಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಕುಂದಗೋಳದಲ್ಲಿ ಮುಸ್ಲಿಂ ಸಮುದಾಯವು ಮಹತ್ವದ ಮತ್ತು ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆ. ಮುಂಬರುವ ಈದ್ ಮಿಲಾದ್ ಹಬ್ಬವನ್ನು ಡಿ.ಜೆ. ರಹಿತವಾಗಿ ಆಚರಿಸಲು ಒಂಬತ್ತು ಜಮಾತಿನ ಹಿರಿಯರು ಮತ್ತು ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತು ಅವರು ಕುಂದಗೋಳ ಪೊಲೀಸ್ ಠಾಣೆಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಖಹಿಂ ನಾಲಬಂದ ಹಾಗೂ ಸರ್ವ ಸದಸ್ಯರು ಪೊಲೀಸ್ ಠಾಣೆಗೆ ಮವಿ ಪತ್ರ ನೀಡಿದ್ದು, ಪತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಈದ್ ಮಿಲಾದ್ ಹಬ್ಬದ ಪೂರ್ವಭಾವಿ ಸಭೆಯನ್ನು ಶಾದಿ ಮಹಲ್‌ನಲ್ಲಿ ನಡೆಸಲಾಗಿತ್ತು. ಈ ಸಭೆಯಲ್ಲಿ, ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1500ನೇ ಜನ್ಮದಿನಾಚರಣೆಯ ಶುಭ ಸಂದರ್ಭದಲ್ಲಿ, ಈ ವರ್ಷದಿಂದ ಡಿ.ಜೆ. ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಲಾಯಿತು. ಡಿ.ಜೆ. ಬದಲು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಬ್ಬವನ್ನು ಆಚರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಲು ತೀರ್ಮಾನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅಂಜುಮನ್ ಸಂಸ್ಥೆ ಮತ್ತು ಜಮಾತಿನ ಹಿರಿಯರು ತಮ್ಮ ಪತ್ರದಲ್ಲಿ, ಈದ್ ಮಿಲಾದ್ ಹಬ್ಬಕ್ಕೆ ಯಾರಾದರೂ ಡಿ.ಜೆ. ಬಳಸಿದರೆ ಅದಕ್ಕೆ ಸಮುದಾಯದ ಹಿರಿಯರು ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ, ತಮ್ಮ ನಿರ್ಣಯಕ್ಕೆ ಬದ್ಧರಾಗಿರುವುದಾಗಿ ಸಮುದಾಯದ ಮುಖಂಡರು ಹೇಳಿದ್ದಾರೆ.

ಪೊಲೀಸರ ಪ್ರತಿಕ್ರಿಯೆ: ಒಳ್ಳೆಯ ನಿರ್ಧಾರ, ಕಾನೂನು ಕ್ರಮ ಅನಿವಾರ್ಯ
ಮುಸ್ಲಿಂ ಸಮುದಾಯದ ಈ ಸಕಾರಾತ್ಮಕ ನಿರ್ಧಾರಕ್ಕೆ ಕುಂದಗೋಳದ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಸಿಪಿಐ ಶಿವಾನಂದ ಅಂಬೀಗೇರ ಅವರು, “ಇದು ಒಂದು ಒಳ್ಳೆಯ ಮತ್ತು ಅನುಕರಣೀಯ ನಿರ್ಧಾರ. ಡಿ.ಜೆ.ಯಿಂದಾಗಿ ನಮ್ಮ ಸಂಸ್ಕೃತಿ ಉಳಿಯುವ ಬದಲು ಹಾಳಾಗುತ್ತಿದೆ, ಇದರಿಂದ ಹಲವು ದುಶ್ಚಟಗಳು ಕೂಡ ಸೇರಿಕೊಳ್ಳುತ್ತವೆ. ತಮ್ಮ ಸಮಿತಿಯಿಂದ ಈ ಒಳ್ಳೆಯ ನಿರ್ಧಾರ ಮಾಡಿದ್ದೀರಿ, ಇದಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆ ಇದೆ” ಎಂದು ಪ್ರಶಂಸಿಸಿದರು.
ಅಲ್ಲದೆ, “ಈ ನಿರ್ಧಾರವನ್ನು ಮೀರಿ ಯಾರಾದರೂ ವರ್ತಿಸಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ನಾವೆಲ್ಲರೂ ಸೇರಿ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ” ಎಂದೂ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಆರ್ ಎಚ್ ಕಳ್ಳಿಮನಿ, ಸಲೀಂ ಕ್ಯಾಲಕೊಂಡ, ಏ ಟಿ ಹುಬ್ಬಳ್ಳಿ, ಮಲ್ಲಿಕ್ ಶಿರೂರ, ಬಾಬಾಜಾನ್ ಮಿಶ್ರೀಕೊಟಿ, ಸಲೀಂ ಕಡ್ಲಿ, ನಾಸಿರ್ ಬಾನಿ, ಮೌಲಾಸಾ ಶೆರವಾಡ, ಜಾಕಿರ್ ಹುಸೇನ್ ಯರಗುಪ್ಪಿ, ಹಜರತ್ ಅಲಿ ಕರ್ಜಗಿ, ಸಲೀಂ ಜಾಗಿರ್ದಾರ, ಮಹಮ್ಮದ್ ರಫಿಕ್ ಶೇರವಾಡ, ಮರ್ದಾನಿ ಮುಲ್ಲಾ, ಎಮ್ ಎಮ್ ಜಂಗ್ಲಿ, ಮಹಮ್ಮದ್ ಗೌಸ್ ಕಲೇಗಾರ,
ಮಾಬುಬಲಿ ನದಾಪ್, ಬಾಬುಸಾಬ ಮಿಶ್ರೀಕೊಟಿ, ಸಮಾಜದ ಅನೇಕರಿದ್ದರು.

Leave a Reply

Your email address will not be published. Required fields are marked *