ಐತಿಹಾಸಿಕ ಸಾಧನೆ ಮಾಡಿದ ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆ: ಸರ್ಕಾರಕ್ಕೆ ದಾಖಲೆಯ ₹135 ಕೋಟಿ ಲಾಭಾಂಶ ಹಸ್ತಾಂತರ!

Spread the love

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ದಾಖಲೆಯ ₹135 ಕೋಟಿ ಲಾಭಾಂಶದ ಚೆಕ್ ಹಸ್ತಾಂತರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. KSDL ನಿಂದ ಈ ಮೊತ್ತದ ಲಾಭಾಂಶವನ್ನು ಸರ್ಕಾರಕ್ಕೆ ನೀಡಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ.

ವಿಧಾನಸೌಧದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 66ನೇ ಸಭೆ ಹಾಗೂ ಬಂಡವಾಳ ಹೂಡಿಕೆ ಉತ್ತೇಜನಕ್ಕೆ ಸಮಗ್ರ ಏಕಗವಾಕ್ಷಿ ವ್ಯವಸ್ಥೆ ಮತ್ತು ವ್ಯಾಪಾರ ಒಪ್ಪಿಗೆ ನೀಡಿಕೆ ವ್ಯವಸ್ಥೆಯ ಸರಳೀಕರಣ ಕುರಿತ ಸಭೆಯಲ್ಲಿ ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಯಿತು. ಸಭೆಯಲ್ಲಿ ಸಾರ್ವಜನಿಕ ವಲಯದ KSDL ಸಂಸ್ಥೆಯು ತನ್ನ 2024-25ನೇ ಸಾಲಿನ ಲಾಭದಲ್ಲಿನ ಪಾಲನ್ನು ಚೆಕ್ ನ್ನು ಸಿ ಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಮೂಲಕ ಸರ್ಕಾರಕ್ಕೆ ಹಸ್ತಾಂತರಿಸಿತು.

ದಾಖಲೆ ಸೃಷ್ಟಿಸಿದ KSDL ವಹಿವಾಟು
KSDL ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ ಬೃಹತ್ ವಹಿವಾಟು ನಡೆಸಿದೆ. ಸಂಸ್ಥೆಯ ವಹಿವಾಟು ₹1,700 ಕೋಟಿ ತಲುಪಿದ್ದು, ₹451 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ನಿಯಮಾವಳಿಗಳ ಪ್ರಕಾರ, ಗಳಿಸಿದ ಲಾಭದಲ್ಲಿ ಶೇ.30ರಷ್ಟನ್ನು ಸಂಸ್ಥೆಯು ಸರ್ಕಾರಕ್ಕೆ ಲಾಭಾಂಶವಾಗಿ ನೀಡಿದ್ದು, ಅದು ₹135 ಕೋಟಿಯಾಗಿದೆ. ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ಈ ಕುರಿತು ಮಾಹಿತಿ ನೀಡಿದ್ದು, ವಹಿವಾಟು, ಲಾಭ ಮತ್ತು ಸರ್ಕಾರಕ್ಕೆ ನೀಡಿದ ಲಾಭಾಂಶ – ಈ ಮೂರರಲ್ಲೂ KSDL ಸಂಸ್ಥೆಯು ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ ಎಂದು ತಿಳಿಸಿದರು.

ಬದಲಾವಣೆಗೆ ಸಾಕ್ಷಿ: ಡಿ ಸಿ ಎಂ: ಡಿ.ಕೆ. ಶಿವಕುಮಾರ್
ಈ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದಾಗ (2022-23) ಸಂಸ್ಥೆಯು ಕೇವಲ ₹54 ಕೋಟಿ ಲಾಭಾಂಶ ನೀಡಿತ್ತು. 2023-24ರಲ್ಲಿ ಇದು ₹108 ಕೋಟಿಗೆ ಏರಿತ್ತು. ಈಗಿನ ದಾಖಲೆಯ ₹135 ಕೋಟಿ ಲಾಭಾಂಶವು ಹಿಂದಿನ ವರ್ಷಕ್ಕಿಂತ ₹27 ಕೋಟಿ ಹೆಚ್ಚಳವಾಗಿದೆ. ಮುಂದಿನ ವರ್ಷಗಳಲ್ಲಿ ಈ ಮೊತ್ತ ಮತ್ತಷ್ಟು ಹೆಚ್ಚಾಗಲಿದೆ. ಈ ಮೂಲಕ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿ ಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ ಬಿ ಪಾಟೀಲ ಇತರರು ಇದ್ದರು

Leave a Reply

Your email address will not be published. Required fields are marked *