ವಿಧಾನಸೌಧದಲ್ಲಿ ಹೈಡ್ರಾಮಾ: ಭಾಷಣ ಓದದೇ ಹೊರನಡೆದ ರಾಜ್ಯಪಾಲರು, ದಾರಿ ತಡೆದ ಕಾಂಗ್ರೆಸ್ ನಾಯಕರು

Spread the love

ಬೆಂಗಳೂರು, ಜ. 22: ರಾಜ್ಯದ ವಿಧಾನಮಂಡಲದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಹೈಡ್ರಾಮಾಕ್ಕೆ ಗುರುವಾರ ವಿಧಾನಸೌಧದ ಜಂಟಿ ಅಧಿವೇಶನ ಸಾಕ್ಷಿಯಾಯಿತು. ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಶೀತಲ ಸಮರ ಸ್ಫೋಟಗೊಂಡಿದ್ದು, ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ನಿರಾಕರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಕೇವಲ ಎರಡೇ ನಿಮಿಷದಲ್ಲಿ ಭಾಷಣ ಮುಗಿಸಿ ಸದನದಿಂದ ಹೊರನಡೆಯುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದರು.

​ಸಂಪ್ರದಾಯದಂತೆ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲು ಆಗಮಿಸಿದ ರಾಜ್ಯಪಾಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸ್ಪೀಕರ್ ಯು.ಟಿ. ಖಾದರ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಸದನದ ಪೀಠವೇರಿದ ರಾಜ್ಯಪಾಲರು ಸದಸ್ಯರಿಗೆ ಸ್ವಾಗತ ಕೋರಿ, “ನನ್ನ ಸರ್ಕಾರ ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ಭೌತಿಕ ಅಭಿವೃದ್ಧಿಗೆ ಬದ್ಧವಾಗಿದೆ” ಎಂದು ಒಂದೇ ಸಾಲು ಓದಿದರು. ತಕ್ಷಣವೇ “ಜೈ ಹಿಂದ್, ಜೈ ಕರ್ನಾಟಕ” ಎನ್ನುತ್ತಾ ಭಾಷಣಕ್ಕೆ ಪೂರ್ಣವಿರಾಮ ಇಟ್ಟರು.

ಸದನದಲ್ಲಿ ಗದ್ದಲ, ನೂಕುನುಗ್ಗಲು:

ರಾಜ್ಯಪಾಲರು ಭಾಷಣ ಮೊಟಕುಗೊಳಿಸಿ ಹೊರಡಲು ಅನುವಾಗುತ್ತಿದ್ದಂತೆ ಸದನದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಯಿತು. ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಪೂರ್ಣ ಭಾಷಣ ಓದುವಂತೆ ತಾಕೀತು ಮಾಡಿದರು. ಆದರೆ ರಾಜ್ಯಪಾಲರು ಕೆಳಗಿಳಿಯುತ್ತಿದ್ದಂತೆ, ಕಾಂಗ್ರೆಸ್ ಸದಸ್ಯರಾದ ಎಚ್.ಸಿ. ಬಾಲಕೃಷ್ಣ, ಬಿ.ಕೆ. ಹರಿಪ್ರಸಾದ್ ಮತ್ತು ಎಸ್. ರವಿ ಅವರು ರಾಜ್ಯಪಾಲರ ದಾರಿಗೆ ಅಡ್ಡಲಾಗಿ ನಿಂತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

​ಪರಿಸ್ಥಿತಿ ಕೈಮೀರುತ್ತಿದ್ದಂತೆ ಮಾರ್ಷಲ್‌ಗಳು ಮಧ್ಯಪ್ರವೇಶಿಸಿ, ಹರಿಪ್ರಸಾದ್ ಅವರನ್ನು ಪಕ್ಕಕ್ಕೆ ದೂಡಿ ರಾಜ್ಯಪಾಲರಿಗೆ ದಾರಿ ಮಾಡಿಕೊಟ್ಟರು. ಈ ವೇಳೆ ಆಕ್ರೋಶಗೊಂಡ ಶಾಸಕರು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದರು.

ಕೇಂದ್ರದ ಕೈಗೊಂಬೆ ಎಂದ ಸಿಎಂ:

ಘಟನೆಯ ಬಳಿಕ ತೀವ್ರ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, “ಸಂವಿಧಾನದ ಪ್ರಕಾರ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನೇ ರಾಜ್ಯಪಾಲರು ಓದಬೇಕು. ಆದರೆ ಅವರು ಕೇವಲ ಒಂದು ಪ್ಯಾರಾ ಓದಿ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ,” ಎಂದು ಕಿಡಿಕಾರಿದರು.

ಸಂಘರ್ಷಕ್ಕೆ ಅಸಲಿ ಕಾರಣವೇನು?

ಕೇಂದ್ರ ಸರ್ಕಾರವು ‘ಮನರೇಗಾ’ ಯೋಜನೆಯಲ್ಲಿ ಮಹಾತ್ಮ ಗಾಂಧಿ ಹೆಸರನ್ನು ಕೈಬಿಟ್ಟು, ‘ವಿಬಿ ಜಿ ರಾಮ್ ಜಿ’ ಯೋಜನೆ ಜಾರಿಗೆ ತಂದಿರುವುದನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸುತ್ತಿದೆ. ಈ ಹೊಸ ಯೋಜನೆಯಡಿ ಜನರು ಎಲ್ಲಿ ಕೆಲಸ ಮಾಡಬೇಕೆಂಬುದನ್ನು ಕೇಂದ್ರವೇ ನಿರ್ಧರಿಸುತ್ತದೆ. ಇದನ್ನು ವಿರೋಧಿಸುವ ಮತ್ತು ಮನರೇಗಾ ಮರುಸ್ಥಾಪನೆಗೆ ರೈತ ಮಾದರಿ ಹೋರಾಟ ನಡೆಸುವ ಅಂಶಗಳನ್ನು ಭಾಷಣದ ಪ್ರತಿಯಲ್ಲಿ ಸೇರಿಸಲಾಗಿತ್ತು. ಕೇಂದ್ರದ ಈ ನಡೆಯನ್ನು ಟೀಕಿಸುವ ಸಾಲುಗಳನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

​ಸದ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದ ಪ್ರತಿಯನ್ನೇ ಅಧಿಕೃತವೆಂದು ಪರಿಗಣಿಸಿ ಎಲ್ಲ ಶಾಸಕರಿಗೆ ಹಂಚಲಾಗಿದ್ದು, ರಾಜ್ಯಪಾಲರ ನಡೆ ಖಂಡಿಸಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ.

Leave a Reply

Your email address will not be published. Required fields are marked *