
ಧಾರವಾಡ: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಸೇರಿ ಸುಮಾರು 93,496.98 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಈ ಕುರಿತು ಜಂಟಿ ಸಮೀಕ್ಷೆ ಮಾಡಿ ಸಿದ್ಧಪಡಿಸಿದ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ದತ್ತಾಂಶಗಳನ್ನು ದಾಖಲಿಸಲು ವೆಬ್‌ಸೈಟ್ ತೆರೆಯಿಸಿ, ರೈತರಿಗೆ ತಕ್ಷಣ ಪರಿಹಾರ ಬಿಡುಗಡೆಗೆ ಕ್ರಮವಹಿಸುವಂತೆ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮುಖ್ಯಮಂತ್ರಿಗಳನ್ನು ವಿನಂತಿಸಿದರು.
ಸೋಮವಾರದಂದು ಮಧ್ಯಾಹ್ನ ಮುಖ್ಯಮಂತ್ರಿಗಳೊಂದಿಗೆ ಧಾರವಾಡ ಜಿಲ್ಲಾಡಳಿತವು ಭಾಗವಹಿಸಿದ್ದ ವಿಡಿಯೋ ಸಂವಾದದಲ್ಲಿ, 2025ರ ಮುಂಗಾರು ಅವಧಿಯಲ್ಲಿ ಉಂಟಾದ ಅತಿವೃಷ್ಟಿ ಹಾನಿ ಮತ್ತು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಿ ಅವರು ಮಾತನಾಡಿದರು. ರಾಜ್ಯದಲ್ಲಿಯೇ ಮೊದಲನೆಯದಾಗಿ ಧಾರವಾಡ ಜಿಲ್ಲಾಡಳಿತವು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ತಂಡದಿಂದ ಜಂಟಿ ಸಮೀಕ್ಷೆಯನ್ನು ಪೂರೈಸಿ, ವರದಿಯನ್ನು ಸರ್ಕಾರಕ್ಕೆ ಪ್ರಸ್ತಾವನೆಯೊಂದಿಗೆ ಸಲ್ಲಿಸಿದೆ ಎಂದು ಸಚಿವರು ವಿವರಿಸಿದರು.
ವಿಪತ್ತು ನಿರ್ವಹಣೆ ಹಾಗೂ ಪರಿಹಾರ ವಿತರಣೆ
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಿರಂತರವಾಗಿ ನಡೆಸಲಾಗಿದ್ದು, ಮೂಲಭೂತ ಸೌಕರ್ಯಗಳ ಹಾನಿ ಪರಿಶೀಲಿಸಿ ದುರಸ್ತಿಗೆ ಆದೇಶಿಸಲಾಗಿದೆ. ತಕ್ಷಣದ ಪರಿಹಾರ ಕ್ರಮಗಳಿಗೆ ಜಿಲ್ಲಾಧಿಕಾರಿಗಳ ಹಾಗೂ ತಾಲ್ಲೂಕು ತಹಶೀಲ್ದಾರರ ಪಿಡಿ ಖಾತೆಗಳಲ್ಲಿ 2713.05 ಲಕ್ಷ ರೂ. ಅನುದಾನ ಲಭ್ಯವಿದೆ ಎಂದರು.
ಜನ ಮತ್ತು ಜಾನುವಾರು ಹಾನಿ : 2025-26ನೇ ಸಾಲಿನ ಏಪ್ರಿಲ್ 1 ರಿಂದ ಸೆಪ್ಟೆಂಬರ್ 6 ರವರೆಗೆ ಧಾರವಾಡ, ಕುಂದಗೋಳ ಹಾಗೂ ಹುಬ್ಬಳ್ಳಿ ನಗರ ತಾಲ್ಲೂಕುಗಳಲ್ಲಿ ಒಟ್ಟು 4 ಮಾನವ ಪ್ರಾಣಹಾನಿ ಸಂಭವಿಸಿದ್ದು, 20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಹುಬ್ಬಳ್ಳಿ, ಕಲಘಟಗಿ ಮತ್ತು ಅಣ್ಣಿಗೇರಿ ತಾಲ್ಲೂಕುಗಳಲ್ಲಿ ಒಟ್ಟು 4 ದೊಡ್ಡ ಜಾನುವಾರು ಮತ್ತು ಹುಬ್ಬಳ್ಳಿಯಲ್ಲಿ 2 ಸಣ್ಣ ಜಾನುವಾರು ಹಾನಿಯಾಗಿದ್ದು, ಒಟ್ಟು 1.58 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಮನೆ ಹಾನಿ ವಿವರ : ಏಪ್ರಿಲ್ 1, 2025 ರಿಂದ ಆಗಸ್ಟ್ 29, 2025ರವರೆಗೆ ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ 182 ಮನೆಗಳ ಹಾನಿ ಸಂಭವಿಸಿದೆ. ಆರ್.ಜಿ.ಆರ್.ಹೆಚ್.ಸಿ.ಎಲ್. ತಂತ್ರಾಂಶದಲ್ಲಿ ದಾಖಲಾದ ಈ ಮನೆಗಳ ಪೈಕಿ ಶೇ. 76 ಕ್ಕಿಂತ ಹೆಚ್ಚು ಹಾನಿಯಾದ 32 ಮನೆಗಳಿಗೆ 38.40 ಲಕ್ಷ ರೂ., ಶೇ. 51 ರಿಂದ 75ರಷ್ಟು ಹಾನಿಯಾದ 49 ಮನೆಗಳಿಗೆ 24.50 ಲಕ್ಷ ರೂ., ಶೇ. 21 ರಿಂದ 50ರಷ್ಟು ಹಾನಿಯಾದ 75 ಮನೆಗಳಿಗೆ 22.50 ಲಕ್ಷ ರೂ. ಹಾಗೂ ಶೇ. 15 ರಿಂದ 20 ರಷ್ಟು ಹಾನಿಯಾದ 26 ಮನೆಗಳಿಗೆ 1.69 ಲಕ್ಷ ರೂ. ಪರಿಹಾರ ನೀಡಲಾಗಿದೆ. ಒಟ್ಟಾರೆಯಾಗಿ 182 ಮನೆಗಳಿಗೆ 87.09 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.
ತಾಲ್ಲೂಕುವಾರು ಬೆಳೆ ಹಾನಿ ಮತ್ತು ಮಳೆ ಪ್ರಮಾಣ
- ಮಳೆ ಮಾಹಿತಿ: ಜೂನ್ 1 ರಿಂದ ಸೆಪ್ಟೆಂಬರ್ 6 ರವರೆಗೆ ಜಿಲ್ಲೆಯಲ್ಲಿ ವಾಡಿಕೆಯ 409.7 ಮಿಮೀ ಮಳೆಗೆ ಪ್ರತಿಯಾಗಿ 454.7 ಮಿಮೀ ಮಳೆಯಾಗಿದ್ದು, ಶೇ. 11 ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ನವಲಗುಂದದಲ್ಲಿ ಶೇ. 94, ಕುಂದಗೋಳದಲ್ಲಿ ಶೇ. 43, ಅಣ್ಣಿಗೇರಿಯಲ್ಲಿ ಶೇ. 41 ರಷ್ಟು ಹೆಚ್ಚುವರಿ ಮಳೆಯಾಗಿದೆ. ಕಲಘಟಗಿ ಮತ್ತು ಅಳ್ನಾವರದಲ್ಲಿ ವಾಡಿಕೆಗಿಂತ ಮಳೆ ಕೊರತೆಯಾಗಿದೆ.
- ಕೃಷಿ ಬೆಳೆ ಹಾನಿ : ಒಟ್ಟು 88,970.90 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿದೆ. ಇದರಲ್ಲಿ ಹೆಸರು ಬೆಳೆ 78,384.94 ಹೆಕ್ಟೇರ್ ಮತ್ತು ಉದ್ದು ಬೆಳೆ 10,585.96 ಹೆಕ್ಟೇರ್ ಹಾನಿಯಾಗಿದೆ. ತಾಲ್ಲೂಕುವಾರು ವಿವರ: ಧಾರವಾಡ 16,910.21 ಹೆಕ್ಟೇರ್, ಹುಬ್ಬಳ್ಳಿ 17,998.32 ಹೆಕ್ಟೇರ್, ಹುಬ್ಬಳ್ಳಿ ನಗರ 1,303.29 ಹೆಕ್ಟೇರ್, ನವಲಗುಂದ 23,993.98 ಹೆಕ್ಟೇರ್, ಅಣ್ಣಿಗೇರಿ 15,324.87 ಹೆಕ್ಟೇರ್ ಮತ್ತು ಕುಂದಗೋಳ 13,440.23 ಹೆಕ್ಟೇರ್.
ತೋಟಗಾರಿಕೆ ಬೆಳೆ ಹಾನಿ: ಒಟ್ಟು 4,526.08 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. ಇದರಲ್ಲಿ ಒಣಮೆಣಸಿನಕಾಯಿ 904.83 ಹೆಕ್ಟೇರ್, ಈರುಳ್ಳಿ 3,376.54 ಹೆಕ್ಟೇರ್ ಮತ್ತು ಬೆಳ್ಳುಳ್ಳಿ 244.71 ಹೆಕ್ಟೇರ್ ಸೇರಿದೆ. ತಾಲ್ಲೂಕುವಾರು ವಿವರ: ಧಾರವಾಡ 895 ಹೆಕ್ಟೇರ್ (ಈರುಳ್ಳಿ), ನವಲಗುಂದ 2,323.37 ಹೆಕ್ಟೇರ್ (ಒಣಮೆಣಸಿನಕಾಯಿ ಮತ್ತು ಈರುಳ್ಳಿ), ಅಣ್ಣಿಗೇರಿ 1,063 ಹೆಕ್ಟೇರ್ (ಒಣಮೆಣಸಿನಕಾಯಿ ಮತ್ತು ಈರುಳ್ಳಿ) ಹಾಗೂ ಕುಂದಗೋಳ 244.71 ಹೆಕ್ಟೇರ್ (ಬೆಳ್ಳುಳ್ಳಿ).
ಮೂಲಭೂತ ಸೌಕರ್ಯಗಳ ಹಾನಿ
ನಿರಂತರ ಮಳೆಯಿಂದಾಗಿ ರಸ್ತೆಗಳು ಸೇರಿದಂತೆ ಹಲವು ಸೌಕರ್ಯಗಳಿಗೆ ಹಾನಿಯಾಗಿದ್ದು, ರಾಜ್ಯ ಹೆದ್ದಾರಿಗಳು-5.70 ಕಿ.ಮೀ., ಜಿಲ್ಲಾ ರಸ್ತೆಗಳು-20.38 ಕಿ.ಮೀ., ಗ್ರಾಮೀಣ ರಸ್ತೆಗಳು-340.09 ಕಿ.ಮೀ. ಹಾನಿಗೊಳಗಾಗಿವೆ. ಜೊತೆಗೆ 102 ಸೇತುವೆಗಳು/ಸಿಡಿಗಳು, 70 ಶಾಲೆಗಳು, 49 ಅಂಗನವಾಡಿ ಕೇಂದ್ರಗಳು, 1,241 ವಿದ್ಯುತ್ ಕಂಬಗಳು ಮತ್ತು 80 ವಿದ್ಯುತ್ ಪರಿವರ್ತಕಗಳು ಹಾನಿಯಾಗಿದೆ ಎಂದು ಸಭೆಯಲ್ಲಿ ವರದಿ ಸಲ್ಲಿಸಲಾಯಿತು.
ಈ ಸಭೆಯಲ್ಲಿ ವಿಡಿಯೋ ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ ಸೇರಿದಂತೆ ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಹಾಗೂ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

