
ಕುಂದಗೋಳ/ಧಾರವಾಡ: ಇತ್ತೀಚೆಗೆ ಸುರಿದ ಅತಿ ಹೆಚ್ಚು ಮಳೆ ಹಾಗೂ ಬೆಣ್ಣಿಹಳ್ಳದ ಪ್ರವಾಹದಿಂದ ಧಾರವಾಡ ಜಿಲ್ಲಾ ಕುಂದಗೋಳ ತಾಲ್ಲೂಕಿನಾದ್ಯಂತ ಗ್ರಾಮೀಣ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು, ತಕ್ಷಣವೇ ರಸ್ತೆಗಳ ದುರಸ್ತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) (ನಾರಾಯಣಗೌಡ್ರ ಬಣ)ದ ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ ಅವರು ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಕಲ್ಲಪ್ಪ ಅವರು, ಕುಂದಗೋಳ ತಾಲ್ಲೂಕಿನಾದ್ಯಂತ ಅತಿವೃಷ್ಟಿ ಮತ್ತು ಬೆಣ್ಣಿಹಳ್ಳದ ಪ್ರವಾಹದಿಂದ ಆದ ಹಾನಿಯನ್ನು ವಿವರಿಸಿದ್ದಾರೆ.
ದುರಸ್ತಿ ಕಾಣದ ರಸ್ತೆಗಳು:
ಅತೀ ಮಳೆಯಿಂದಾಗಿ ಹಿರೇನರ್ತಿ-ಚಾಕಲಬ್ಬಿ, ಕೊಂಕಣಕುರಹಟ್ಟಿ, ಸಂಶಿ-ಚಾಕಲಬ್ಬಿ, ಸಂಶಿ-ಅತ್ತಿಗೇರಿ, ಸಂಶಿ-ಗುಡಗೇರಿ, ಹಿರೇನರ್ತಿ-ಬೆನಕನಹಳ್ಳಿ, ಹಿರೇನರ್ತಿ-ಬಸಾಪೂರ, ಹಿರೇನರ್ತಿ-ಸಂಶಿ ಮತ್ತು ಬೆನಕನಹಳ್ಳಿ-ಗುಡೇನಕಟ್ಟಿ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.
“ಕಳೆದ ಕೆಲ ಸಮಯದಿಂದ ‘ನಮ್ಮ ಹೊಲ ನಮ್ಮ ರಸ್ತೆ’ ಯೋಜನೆಯಡಿ ಯಾವುದೇ ರಸ್ತೆಗಳು ದುರಸ್ತಿ ಕಂಡಿಲ್ಲ. ಪ್ರವಾಹ ಉಂಟಾದ ಬೆಣ್ಣಿಹಳ್ಳದ ಮೇಲಿನ ಸೇತುವೆಗಳನ್ನು ತಕ್ಷಣವೇ ಮೇಲ್ಮಟ್ಟಕ್ಕೆ ಸುಧಾರಣೆ ಮಾಡಬೇಕು, ಇಲ್ಲದಿದ್ದರೆ ಪ್ರತಿ ವರ್ಷ ಪ್ರವಾಹದ ಸಮಸ್ಯೆ ಮುಂದುವರಿಯುತ್ತದೆ,” ಎಂದು ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಹಿರೇನರ್ತಿ ಗ್ರಾಮದ ಮೂಲಸೌಕರ್ಯದ ಕೊರತೆ:
ವಿಶೇಷವಾಗಿ ಹಿರೇನರ್ತಿ ಗ್ರಾಮದಲ್ಲಿನ ಮೂಲಸೌಕರ್ಯಗಳ ಕೊರತೆಯನ್ನು ಕಲ್ಲಪ್ಪ ಅವರು ಮನವಿಯಲ್ಲಿ ತೋರಿಸಿದ್ದಾರೆ. ಹಿರೇನರ್ತಿ ಗ್ರಾಮದ ಕಾಮನಕಟ್ಟಿ ಬೈಲ ಪ್ರದೇಶವು ಮಳೆ ನೀರಿನಿಂದ ಕೊಳಚೆ ಪ್ರದೇಶದಂತಾಗಿದೆ. ಗೌಡರ ಓಣಿಯಿಂದ ಯರಗುಪ್ಪಿ ಗ್ರಾಮದ ರಸ್ತೆವರೆಗೆ, ದಲ್ಲಣ್ಣವರ ಮನೆ ಹಾಗೂ ರಾಜು ಜಾಡರ ಅವರ ಮನೆಯವರೆಗೂ ಸಿಸಿ ರಸ್ತೆ ಮತ್ತು ಗಟಾರಗಳ ನಿರ್ಮಾಣವಾಗಬೇಕು ಎಂದು ಆಗ್ರಹಿಸಲಾಗಿದೆ.
ಅದೇ ರೀತಿ, ಬಸಾಪೂರ ಗ್ರಾಮದ ರಸ್ತೆಯಿಂದ ಕುಡಿಯುವ ನೀರಿನ ಕೆರೆಯವರೆಗೆ, ಯರಗುಪ್ಪಿ ರಸ್ತೆಯಿಂದ ದರ್ಗಾಕ್ಕೆ ಹೋಗುವ ರಸ್ತೆ ಮತ್ತು ಗೌಡಪ್ಪನ ಮನೆಯಿಂದ ಉಣ್ಣೆ ಸೊಸೈಟಿವರೆಗಿನ (ಬಿನ್ ಶೇಕ್ಕಿ ಪ್ಲಾಟ್) ರಸ್ತೆ ಹಾಗೂ ಗಟಾರ ನಿರ್ಮಾಣವಾಗಬೇಕು. ಬಿನ್ ಶೇಕ್ಕಿ ಪ್ಲಾಟ್ ಸೇರಿದಂತೆ ಅನೇಕ ಪ್ರದೇಶದ ರಸ್ತೆಗಳು ಕೊಳಚೆ ಪ್ರದೇಶದಂತೆ ಕಾಣುತ್ತಿದ್ದು, ಪ್ರಾಥಮಿಕ ಶಾಲೆಯಿಂದ ಬಸ್ ನಿಲ್ದಾಣದವರೆಗೂ ರಸ್ತೆ ಮತ್ತು ಗಟಾರ ನಿರ್ಮಾಣ ಕಾರ್ಯವನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಕರವೇ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಮನವಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ರಸ್ತೆಗಳ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ದುರಸ್ತಿ ಮತ್ತು ಗಟಾರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯ ಅಶೋಕ ಘೋರ್ಪಡೆ, ಪ್ರಶಾಂತ ಪೂಜಾರ ಸೇರಿದಂತೆ ಇತರರು ಇದ್ದರು.

