‘ನಾನು ಸೂಕ್ತ ಸಮಯದಲ್ಲಿ ಉತ್ತರ ನೀಡುವೆ’: ಬಾನು ಮುಸ್ತಾಕ್

Spread the love

ಹಾಸನ: ಮೈಸೂರು ದಸರಾ ಉದ್ಘಾಟನೆಗೆ ತಮ್ಮ ಆಯ್ಕೆಗೆ ಸಂಬಂಧಿಸಿ ಬಿಜೆಪಿ ಮುಖಂಡರಿಂದ ವ್ಯಕ್ತವಾಗಿರುವ ವಿರೋಧಕ್ಕೆ ಸಂಬಂಧಿಸಿದಂತೆ, ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಸ್ತಾಕ್ ಅವರು “ಯಾರು ಏನು ಮಾತನಾಡುತ್ತಾರೋ ಮಾತನಾಡಲಿ, ನಾನು ಸೂಕ್ತ ಸಮಯದಲ್ಲಿ, ಸೂಕ್ತ ವೇದಿಕೆಯಲ್ಲಿ ಉತ್ತರ ನೀಡುವೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಈ ಹಿಂದೆ ಏನು ಮಾತನಾಡಿದ್ದೇನೆ ಎಂಬುದನ್ನು ತಿಳಿದುಕೊಂಡು ವಿರೋಧಿಸಲಿ. ಯಾರೋ ವಿರೋಧಿಸಿದ್ದಕ್ಕೆ ನಾನು ಈಗಲೇ ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಡಬೇಕಾಗಿಲ್ಲ. ಮಾತನಾಡುವವರದು ಅವರ ವಾಕ್ ಸ್ವಾತಂತ್ರ್ಯ. ಸೂಕ್ತ ವೇದಿಕೆಯಲ್ಲಿ ಅದಕ್ಕೆಲ್ಲ ಉತ್ತರ ಸಿಗುತ್ತದೆ” ಎಂದರು.

ದಸರಾ ಉದ್ಘಾಟನೆಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, “ಖಂಡಿತ ಇದು ನನಗೆ ಖುಷಿಯ ಸಂಗತಿ. ನೀವು ಚಾಮುಂಡೇಶ್ವರಿ ತಾಯಿ ಎನ್ನುತ್ತೀರಿ, ನಿಮ್ಮ ಭಾವನೆಗೆ ನನ್ನ ಗೌರವವಿದೆ. ಅನೇಕರು ಇದನ್ನು ನಾಡಹಬ್ಬ ಎನ್ನುತ್ತಾರೆ, ಅದನ್ನು ಕೂಡ ನಾನು ಗೌರವಿಸುತ್ತೇನೆ” ಎಂದು ತಿಳಿಸಿದರು.

‘ಹಿಂದೂ ಸಂಸ್ಕೃತಿ ಒಪ್ಪಿ ಬಂದರೆ ಸ್ವಾಗತ’: ವಿಜಯೇಂದ್ರ
ಬೆಂಗಳೂರು: ಬಾನು ಮುಸ್ತಾಕ್ ಅವರು ನಮ್ಮ ಹಿಂದೂ ಸಂಸ್ಕೃತಿ, ಪರಂಪರೆ ಮತ್ತು ಆಚಾರ ವಿಚಾರಗಳನ್ನು ಒಪ್ಪಿ, ಅದರ ಬಗ್ಗೆ ನಂಬಿಕೆ ಇಟ್ಟು ದಸರಾ ಉದ್ಘಾಟನೆಗೆ ಬರುವುದಾದರೆ ಅವರನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಬಾನು ಮುಸ್ತಾಕ್ ಮತ್ತು ಕೊಡಗಿನ ದೀಪಾ ಭಾಸ್ತಿ ಇಬ್ಬರಿಗೂ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಬಂದಿದೆ. ಆದರೆ, ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಅವರ ಜೊತೆ ದೀಪಾ ಅವರನ್ನು ಏಕೆ ಕರೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನಿಸಿಲ್ಲವೇಕೆ?” ಎಂದು ಪ್ರಶ್ನಿಸಿದರು. ಇದು ಮುಖ್ಯಮಂತ್ರಿಗಳಿಗೆ ಕೊಡಗಿನ ಬಗ್ಗೆ ಆಸಕ್ತಿ ಕಡಿಮೆಯಿದೆಯೇ ಎಂಬ ಸಂಶಯವನ್ನು ಹುಟ್ಟುಹಾಕಿದೆ ಎಂದು ವಿಜಯೇಂದ್ರ ಹೇಳಿದರು.

Leave a Reply

Your email address will not be published. Required fields are marked *