ಹರಿಯಾಣದಲ್ಲಿ ಅಪರೂಪದ ಘಟನೆ: ಸುಪ್ರೀಂ ಕೋರ್ಟ್ ಆದೇಶದಂತೆ ಮರು ಎಣಿಕೆ; 51 ಮತಗಳ ಅಂತರದಿಂದ ಸರಪಂಚ್ ಆದ ಮೋಹಿತ್ ಕುಮಾರ್

Spread the love

ಹರಿಯಾಣದಲ್ಲಿ ಅಪರೂಪದ ಘಟನೆ: ಸುಪ್ರೀಂ ಕೋರ್ಟ್ ಆದೇಶದಂತೆ ಮರು ಎಣಿಕೆ; 51 ಮತಗಳ ಅಂತರದಿಂದ ಸರಪಂಚ್ ಆದ ಮೋಹಿತ್ ಕುಮಾರ್

ಹರಿಯಾಣ: ನ್ಯಾಯಾಲಯದ ಸುದೀರ್ಘ ಕಾನೂನು ಹೋರಾಟದ ನಂತರ, ಚುನಾವಣಾ ಅಕ್ರಮವನ್ನು ಬಯಲಿಗೆಳೆದ ಘಟನೆಯೊಂದು ಹರಿಯಾಣದ ಪಾಣಿಪತ್ ಜಿಲ್ಲೆಯ ಬುವಾನಾ ಲಖು ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗೆ ನಡೆದ ಇವಿಎಂ ಮತಗಳ ಮರು ಎಣಿಕೆಯಲ್ಲಿ ಮೋಹಿತ್ ಕುಮಾರ್ 51 ಮತಗಳ ಅಂತರದಿಂದ ಜಯಗಳಿಸಿ, ಗ್ರಾಮದ ಹೊಸ ಸರಪಂಚರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
2022ರ ನವೆಂಬರ್ 2ರಂದು ನಡೆದ ಪಂಚಾಯತ್ ಚುನಾವಣೆಯಲ್ಲಿ ಬುವಾನಾ ಲಖು ಸರಪಂಚ್ ಹುದ್ದೆಗೆ 7 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣಾ ಫಲಿತಾಂಶದಲ್ಲಿ ಕುಲದೀಪ್ ಸಿಂಗ್ ಅವರನ್ನು ವಿಜೇತರು ಎಂದು ಘೋಷಿಸಲಾಗಿತ್ತು. ಆದರೆ, ಈ ಫಲಿತಾಂಶವನ್ನು ಪ್ರಶ್ನಿಸಿದ ಮೋಹಿತ್ ಕುಮಾರ್, ಬೂತ್ ಸಂಖ್ಯೆ 69ರಲ್ಲಿ ತಮ್ಮ ಮತಗಳನ್ನು ತಪ್ಪಾಗಿ ಕುಲದೀಪ್ ಸಿಂಗ್ ಅವರಿಗೆ ದಾಖಲಿಸಲಾಗಿದೆ ಎಂದು ಆರೋಪಿಸಿ ಕಾನೂನು ಸಮರ ಆರಂಭಿಸಿದರು. ಈ ಹೋರಾಟ ಸ್ಥಳೀಯ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ ತನಕ ಸಾಗಿತು.
ನಂತರ ಸುಪ್ರೀಂ ಕೋರ್ಟ್‌ನ ಆದೇಶದಂತೆ, ಇವಿಎಂ ಮತಗಳನ್ನು ಮರು ಎಣಿಕೆ ಮಾಡಲಾಯಿತು. ಈ ಅಪರೂಪದ ಮರು ಎಣಿಕೆಯಲ್ಲಿ ಮೋಹಿತ್ ಕುಮಾರ್ ಅವರು 51 ಮತಗಳ ಹೆಚ್ಚು ಪಡೆದು ವಿಜೇತರಾದರು. ಈ ಮೂಲಕ 2022ರ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಿ, ಮೋಹಿತ್ ಕುಮಾರ್‌ಗೆ ವಿಜಯ ಘೋಷಿಸಲಾಯಿತು. ಅವರು ಅಧಿಕೃತವಾಗಿ ಪಾಣಿಪತ್‌ನ ಬುವಾನಾ ಲಖು ಗ್ರಾಮದ ಸರಪಂಚರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ದೇಶದಲ್ಲಿ ಮತಗಳ್ಳತನ ಮತ್ತು ಚುನಾವಣಾ ಅಕ್ರಮಗಳ ವಿರುದ್ಧ ವ್ಯಾಪಕ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಮೋಹಿತ್ ಕುಮಾರ್ ಅವರು ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿ ಪಡೆದ ಈ ಗೆಲುವು ಹೊಸ ಭರವಸೆಯನ್ನು ಮೂಡಿಸಿದೆ. ಇದು ನ್ಯಾಯ ವ್ಯವಸ್ಥೆಯ ಮೇಲೆ ಜನರಿಗಿರುವ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *