ಹನೂರು: ಹೋಟೆಲ್, ಬೇಕರಿಗಳ ಮೇಲೆ ಆಹಾರ ಇಲಾಖೆ ದಾಳಿ; 11 ಗೃಹಬಳಕೆ ಸಿಲಿಂಡರ್‌ಗಳ ವಶ

Spread the love

ಹನೂರು: ಪಟ್ಟಣದ ವಿವಿಧ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಬೇಕರಿಗಳ ಮೇಲೆ ಆಹಾರ ನಿರೀಕ್ಷಕರು ದಿಢೀರ್ ದಾಳಿ ನಡೆಸಿ, ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ 11 ಗೃಹಬಳಕೆಯ ಅನಿಲ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

​ಜಾಗತಿಕ ಮಟ್ಟದಲ್ಲಿ ಯುದ್ಧದಂತಹ ಸನ್ನಿವೇಶಗಳಿಂದ ಅನಿಲ ಕೊರತೆ ಎದುರಾಗುತ್ತಿರುವ ಬೆನ್ನಲ್ಲೇ, ತಾಲ್ಲೂಕು ಕೇಂದ್ರದಲ್ಲಿ ಗೃಹಬಳಕೆಯ ಸಿಲಿಂಡರ್‌ಗಳನ್ನು ವ್ಯಾಪಾರ ವಹಿವಾಟಿಗೆ ಅಕ್ರಮವಾಗಿ ಬಳಸಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ವಸುಂಧರಾ ಅವರ ಸೂಚನೆಯ ಮೇರೆಗೆ ಆಹಾರ ನಿರೀಕ್ಷಕ ವಿಷ್ಣುಮೂರ್ತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

​ಪಟ್ಟಣದ ಶ್ರೀ ಸಾಯಿ ರೆಸ್ಟೋರೆಂಟ್, ಬಸವೇಶ್ವರ ಟೀ ಸ್ಟಾಲ್, ಮಹದೇಶ್ವರ ಹೋಟೆಲ್, ಹರ್ಷ ಆರಾಧ್ಯ ಟೀ ಸ್ಟಾಲ್, ರಾಜಮಣಿ ಟೀ ಸ್ಟಾಲ್, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿರುವ ನಂದಿನಿ ಹಾಲಿನ ಕೇಂದ್ರ, ಟೈಮ್ ಫಾರ್ ಟೀ ಹಾಗೂ ಶಾಂತಿ ಬೇಕರಿಗಳ ಮೇಲೆ ದಾಳಿ ನಡೆಸಲಾಗಿದೆ. ಅಶ್ವಿನಿ ಬೇಕರಿಯಲ್ಲಿ ಮೂರು ಸಿಲಿಂಡರ್ ಸೇರಿದಂತೆ ಒಟ್ಟು 11 ಸಿಲಿಂಡರ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

​ಅಕ್ರಮವಾಗಿ ಗೃಹಬಳಕೆಯ ಸಿಲಿಂಡರ್ ಬಳಸುತ್ತಿದ್ದ ಮಾಲೀಕರ ವಿರುದ್ಧ ಎಲ್‌ಪಿಜಿ ನಿಯಂತ್ರಣ ಕಾಯ್ದೆ 2000ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ವಶಪಡಿಸಿಕೊಂಡ ಸಿಲಿಂಡರ್‌ಗಳನ್ನು ಸ್ಥಳೀಯ ಭಾರತ್ ಗ್ಯಾಸ್ ಏಜೆನ್ಸಿಗೆ ಹಸ್ತಾಂತರಿಸಲಾಗಿದೆ ಎಂದು ವಿಷ್ಣುಮೂರ್ತಿ ತಿಳಿಸಿದ್ದಾರೆ.

​ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಹನೂರು ಪೊಲೀಸ್ ಠಾಣೆಯ ಎಎಸ್‌ಐ ಶಿವರಾಜ್, ಆಹಾರ ಇಲಾಖೆಯ ಸಿಬ್ಬಂದಿ ಸೋಮಣ್ಣ ಸೇರಿದಂತೆ ಇಲಾಖೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ: ಕಾರ್ತಿಕ್ ಗೌಡ, ಹನೂರು.

Leave a Reply

Your email address will not be published. Required fields are marked *