
ಹನೂರು: ತಾಲೂಕಿನ ಲೊಕ್ಕನಹಳ್ಳಿ–ಆಂಡಿಪಾಳ್ಯ ರಸ್ತೆಯಲ್ಲಿ ಇಂದು ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಅತಿವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಐವರು ಗಾಯಗೊಂಡ ಘಟನೆ ನಡೆದಿದೆ.
ಒಡೆಯರಪಾಳ್ಯ ಗ್ರಾಮದ ನಿವಾಸಿಯೊಬ್ಬರು ಚಲಾಯಿಸುತ್ತಿದ್ದ ಕೆಎ-01 ಎಂಜೆ 1260 ನೋಂದಣಿ ಸಂಖ್ಯೆಯ ಕಾರು, ಒಡೆಯರಪಾಳ್ಯದಿಂದ ಆಂಡಿಪಾಳ್ಯದ ಕಡೆಗೆ ಅತಿವೇಗವಾಗಿ ಸಾಗುತ್ತಿತ್ತು ಎನ್ನಲಾಗಿದೆ. ರಾತ್ರಿಯ ಕತ್ತಲಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನವು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲೇ ಪಲ್ಟಿ ಹೊಡೆದಿದ್ದು, ವಾಹನವು ಸಂಪೂರ್ಣವಾಗಿ ಜಖಂಗೊಂಡಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಶಬ್ದ ಕೇಳಿ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ, ಕಾರಿನೊಳಗೆ ಸಿಲುಕಿದ್ದ ಐವರು ಗಾಯಾಳುಗಳನ್ನು ಹೊರತೆಗೆದು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

