ಹನೂರು: ಕಾಡಾನೆಗಳ ದಾಳಿಗೆ ಬಾಳೆ, ಅಡಿಕೆ ತೋಟ ನಾಶ; ಕಂಗಾಲಾದ ರೈತ

Spread the love

ಹನೂರು: ರೈತರು ತಮ್ಮ ಆರ್ಥಿಕ ಸಂಕಷ್ಟದ ನಡುವೆಯೂ ಬದುಕು ಕಟ್ಟಿಕೊಳ್ಳಲು ನೆಚ್ಚಿನ ತೋಟಗಳಲ್ಲಿ ಬಾಳೆ, ಅರಿಶಿನ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಕಾಡಿನಿಂದ ಲಗ್ಗೆ ಇಡುವ ವನ್ಯಪ್ರಾಣಿಗಳು ರೈತರ ಬೆಳೆಗಳನ್ನು ಹಾನಿ ಮಾಡಿದರೆ ಅನ್ನದಾತನ ಬದುಕು ಬೀದಿಗೆ ಬರುತ್ತದೆ ಎಂದು ವಕೀಲ ಅಶೋಕ್ ಕುಮಾರ್ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

​ತಾಲೂಕಿನ ಲೋಕನಹಳ್ಳಿ ಹೋಬಳಿಯ ಚಿಕ್ಕಮಾಲಾಪುರ ಗ್ರಾಮದ ಸರ್ವೆ ನಂಬರ್ 117/1 ರ ನಾರಾಯಣ್ ಮೂರ್ತಿ ಹಾಗೂ 117/2 ರ ದಿವ್ಯಶ್ರೀ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ತಡರಾತ್ರಿ ಜಮೀನಿಗೆ ನುಗ್ಗಿದ ಕಾಡಾನೆಗಳ ಹಿಂಡು ಸರಿಸುಮಾರು 170 ರಿಂದ 200 ಬಾಳೆ ಗಿಡಗಳನ್ನು ಹಾಗೂ 30 ಅಡಿಕೆ ಗಿಡಗಳನ್ನು ತುಳಿದು ಸಂಪೂರ್ಣವಾಗಿ ನಾಶಪಡಿಸಿವೆ. ಅಷ್ಟೇ ಅಲ್ಲದೆ, ಜಮೀನಿನ ರಕ್ಷಣೆಗಾಗಿ ಹಾಕಲಾಗಿದ್ದ ತಂತಿ ಬೇಲಿಯನ್ನೂ ಸಹ ಕಾಡಾನೆಗಳು ತುಳಿದು ಮುರಿದು ಹಾಕಿವೆ.

​ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಷ್ಟಪಟ್ಟು ಬೆಳೆಸಿದ್ದ ಫಸಲು ಕೈಗೆ ಬರುವ ಮುನ್ನವೇ ವಿನಾಶವಾಗಿರುವುದನ್ನು ಕಂಡು ರೈತರು ಕಣ್ಣೀರು ಹಾಕುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಿ, ಹಾನಿಗೊಳಗಾದ ಜಮೀನನ್ನು ಪರಿಶೀಲಿಸಬೇಕು ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರವನ್ನು ಆದಷ್ಟು ಶೀಘ್ರವಾಗಿ ವಿತರಿಸಬೇಕು ಎಂದು ರೈತರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇನ್ನು ಕಾಡಾನೆ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ: ಕಾರ್ತಿಕ್ ಗೌಡ, ಹನೂರು.

Leave a Reply

Your email address will not be published. Required fields are marked *