ಹೈದರಾಬಾದ್: ಮೆರವಣಿಗೆಯ ರಥಕ್ಕೆ ವಿದ್ಯುತ್ ತಂತಿ ಸ್ಪರ್ಶ, ಐವರು ಸಾವು: ಕೆಲವರಿಗೆ ಗಂಭೀರ ಗಾಯ:

Spread the love

ಹೈದರಾಬಾದ್: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಥಕ್ಕೆ ವಿದ್ಯುತ್ ತಂತಿ ತಾಗಿ ಐವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹೈದರಾಬಾದ್‌ನ ರಾಮಂತಪುರದ ಗೋಕುಲೇನಗರದಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಗೋಕುಲೇನಗರದಲ್ಲಿ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯ ನೇತೃತ್ವ ವಹಿಸಿದ್ದ ರಥವನ್ನು ಎಳೆಯುತ್ತಿದ್ದ ವಾಹನ ಇದ್ದಕ್ಕಿದ್ದಂತೆ ಕೆಟ್ಟು ನಿಂತಿತ್ತು. ಈ ವೇಳೆ, ಅಲ್ಲಿದ್ದ ಯುವಕರೆಲ್ಲರೂ ಸೇರಿ ರಥವನ್ನು ಕೈಯಿಂದಲೇ ತಳ್ಳಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ರಥ ರಸ್ತೆಬದಿಯಲ್ಲಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿದ್ದು, ಒಂಬತ್ತು ಮಂದಿಗೆ ಪ್ರಬಲ ವಿದ್ಯುತ್ ಆಘಾತ ಉಂಟಾಗಿದೆ.

ದುರಂತದ ಪರಿಣಾಮವಾಗಿ ಐವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಇನ್ನುಳಿದ ನಾಲ್ಕು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ಕೃಷ್ಣ ಯಾದವ್ (21), ಸುರೇಶ್ ಯಾದವ್ (34), ಶ್ರೀಕಾಂತ್ ರೆಡ್ಡಿ (35), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (15) ಎಂದು ಗುರುತಿಸಲಾಗಿದೆ. ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡವರಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರ ಆಪ್ತ ಸಹಾಯಕ ಗಣೇಮೆನ್ ಶ್ರೀನಿವಾಸ್ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಸ್ಥಳೀಯವಾಗಿ ತೀವ್ರ ಆಘಾತ ಮತ್ತು ದುಃಖದ ವಾತಾವರಣ ಸೃಷ್ಟಿಸಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *