
ನವದೆಹಲಿ: ನಾಳೆಯಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸುಧಾರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥಿಕತೆಗೆ ಉತ್ತೇಜನ ನೀಡುವ “ಮುಂದಿನ ಪೀಳಿಗೆಯ ಸುಧಾರಣೆ” ಎಂದು ಬಣ್ಣಿಸಿದ್ದಾರೆ. ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ನಾಳೆಯಿಂದ ನವರಾತ್ರಿ ಮತ್ತು ‘ಜಿಎಸ್ಟಿ ಬಚತ್ ಉತ್ಸವ’ ಎಂಬ ಎರಡು ಹಬ್ಬಗಳು ಪ್ರಾರಂಭವಾಗಲಿವೆ ಎಂದು ಅವರು ಘೋಷಿಸಿದರು.
“ನವರಾತ್ರಿಯ ಮೊದಲ ದಿನದಿಂದ, ದೇಶವು ಆತ್ಮನಿರ್ಭರ ಭಾರತದತ್ತ ಮತ್ತೊಂದು ಪ್ರಮುಖ ಹೆಜ್ಜೆ ಇಡುತ್ತಿದೆ. ನಾಳೆಯಿಂದ ಸೂರ್ಯೋದಯದೊಂದಿಗೆ, ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರಲಾಗುವುದು. ನಿಮ್ಮ ಉಳಿತಾಯವನ್ನು ಹೆಚ್ಚಿಸುವ ‘ಜಿಎಸ್ಟಿ ಬಚತ್ ಉತ್ಸವ’ ಕೂಡ ಪ್ರಾರಂಭವಾಗಲಿದೆ” ಎಂದು ಪ್ರಧಾನಿ ಮೋದಿ ಹೇಳಿದರು. ಈ ಸುಧಾರಣೆಗಳು ಕೇವಲ ಬೆಲೆಗಳನ್ನು ಕಡಿಮೆ ಮಾಡುವುದಲ್ಲದೆ, ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ. ಮಧ್ಯಮ ವರ್ಗದವರ ಉಳಿತಾಯ ಹೆಚ್ಚಾಗುತ್ತದೆ, ಯುವಕರು ಪ್ರಯೋಜನ ಪಡೆಯುತ್ತಾರೆ ಮತ್ತು ಇಡೀ ಆರ್ಥಿಕತೆಯು ವೇಗವನ್ನು ಪಡೆಯಲಿದೆ ಎಂದು ಅವರು ತಿಳಿಸಿದರು.
ಜಿಎಸ್ಟಿ ಜಾರಿಗೆ ಬರುವ ಮೊದಲು ಇದ್ದ ತೆರಿಗೆ ವ್ಯವಸ್ಥೆಯ ಜಟಿಲತೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ದಶಕಗಳಿಂದ ಭಾರತದ ಜನರು ಮತ್ತು ವ್ಯಾಪಾರಿಗಳು ವಿವಿಧ ತೆರಿಗೆಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆಕ್ಟೋಯ್, ಪ್ರವೇಶ ತೆರಿಗೆ, ಮಾರಾಟ ತೆರಿಗೆ, ಅಬಕಾರಿ, ವ್ಯಾಟ್, ಸೇವಾ ತೆರಿಗೆಗಳಂತಹ ಡಜನ್ಗಟ್ಟಲೆ ತೆರಿಗೆಗಳು ಅಸ್ತಿತ್ವದಲ್ಲಿದ್ದವು ಎಂದು ನೆನಪಿಸಿಕೊಂಡರು. “ಒಂದು ನಗರದಿಂದ ಮತ್ತೊಂದು ನಗರಕ್ಕೆ ಸರಕುಗಳನ್ನು ಕಳುಹಿಸಲು, ನಾವು ಲೆಕ್ಕವಿಲ್ಲದಷ್ಟು ಚೆಕ್ಪೋಸ್ಟ್ಗಳನ್ನು ದಾಟಬೇಕಾಗಿತ್ತು” ಎಂದು ಅವರು ವಿವರಿಸಿದರು. ೨೦೧೭ ರಲ್ಲಿ ಜಿಎಸ್ಟಿ ಜಾರಿಗೆ ಬಂದಾಗ ಇದು ಇತಿಹಾಸವನ್ನು ಬದಲಾಯಿಸುವ ಮತ್ತು ಹೊಸ ಯುಗ ಸೃಷ್ಟಿಸುವ ಆರಂಭವಾಗಿತ್ತು ಎಂದು ಅವರು ಹೇಳಿದರು.
ಜಿಎಸ್ಟಿ ಸುಧಾರಣೆಗಳು ವ್ಯಾಪಾರ ಮಾಡುವುದನ್ನು ಸುಲಭಗೊಳಿಸುತ್ತವೆ, ಹೂಡಿಕೆಗಳನ್ನು ಆಕರ್ಷಕವಾಗಿಸುತ್ತವೆ ಮತ್ತು ಎಲ್ಲಾ ರಾಜ್ಯಗಳನ್ನೂ ಅಭಿವೃದ್ಧಿಯ ಓಟದಲ್ಲಿ ಸಮಾನ ಪಾಲುದಾರರನ್ನಾಗಿ ಮಾಡುತ್ತವೆ. ಇದರಿಂದ ದೇಶದ ಬೆಳವಣಿಗೆಯ ಕಥೆ ಮತ್ತಷ್ಟು ವೇಗ ಪಡೆಯುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. “ಹಬ್ಬಗಳ ಈ ಸಮಯದಲ್ಲಿ ಎಲ್ಲರ ಬಾಯಿಯೂ ಸಿಹಿಯಾಗುತ್ತದೆ, ದೇಶದ ಪ್ರತಿ ಕುಟುಂಬದ ಸಂತೋಷ ಹೆಚ್ಚಾಗುತ್ತದೆ. ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳು ಮತ್ತು ‘ಬಚತ್ ಉತ್ಸವ’ಕ್ಕಾಗಿ ದೇಶಾದ್ಯಂತದ ಲಕ್ಷಾಂತರ ಕುಟುಂಬಗಳಿಗೆ ನನ್ನ ಹೃತ್ತೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು” ಎಂದು ಹಿಂದಿಯಲ್ಲಿ ಶುಭ ಹಾರೈಸಿದರು.
ಬಿಜೆಪಿಯಿಂದ ‘ಜಿಎಸ್ಟಿ ಉಳಿತಾಯ ಉತ್ಸವ’
ಇದೇ ವೇಳೆ, ಬಿಜೆಪಿ ಸೋಮವಾರದಿಂದ ಏಳು ದಿನಗಳ ಕಾಲ ‘ಜಿಎಸ್ಟಿ ಉಳಿತಾಯ ಉತ್ಸವ’ ಆಚರಿಸುವುದಾಗಿ ಘೋಷಿಸಿದೆ. ಪಕ್ಷದ ನಾಯಕತ್ವವು ತನ್ನ ಎಲ್ಲಾ ಸಂಸದರಿಗೆ ಅವರವರ ಕ್ಷೇತ್ರಗಳಿಗೆ ಭೇಟಿ ನೀಡಿ ಹಬ್ಬದ ವಾತಾವರಣವನ್ನು ಸೃಷ್ಟಿಸುವಂತೆ ಸೂಚಿಸಿದೆ. ಎಲ್ಲಾ ಬಿಜೆಪಿ ಸಂಸದರು ಮತ್ತು ಪಕ್ಷದ ಕಾರ್ಯಕರ್ತರು ಸೆಪ್ಟೆಂಬರ್ ೨೯ ರವರೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಮಾರುಕಟ್ಟೆಯಲ್ಲಿ ಪಾದಯಾತ್ರೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರತಿಯೊಂದು ಅಂಗಡಿಗೂ ಭೇಟಿ ನೀಡಿ, ಅಂಗಡಿಯವರಿಗೆ ಹೂಗಳನ್ನು ಮತ್ತು ‘ಹೆಮ್ಮೆಯಿಂದ ಹೇಳಿ, ಇದು ಸ್ವದೇಶಿ’ ಎಂಬ ಫಲಕಗಳನ್ನು ವಿತರಿಸಲಿದ್ದಾರೆ.
ಜಿಎಸ್ಟಿ ದರಗಳು ತರ್ಕಬದ್ಧಗೊಳಿಸುವಿಕೆ
ಈ ತಿಂಗಳ ಆರಂಭದಲ್ಲಿ ಜಿಎಸ್ಟಿ ಕೌನ್ಸಿಲ್ ತನ್ನ ೫೬ನೇ ಸಭೆಯಲ್ಲಿ ತೆರಿಗೆ ಸ್ಲ್ಯಾಬ್ಗಳನ್ನು ಸರಳೀಕರಿಸುವ, ಬಳಕೆಯನ್ನು ಹೆಚ್ಚಿಸುವ ಮತ್ತು ದರಗಳನ್ನು ತರ್ಕಬದ್ಧಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪರಿಷ್ಕರಣೆಗಳನ್ನು ಘೋಷಿಸಿತ್ತು. ಅದರಂತೆ, ೫% ಮತ್ತು ೧೮% ರ ಹೊಸ ಎರಡು ಹಂತದ ರಚನೆ, ಹಾಗೂ ಸೂಪರ್ ಐಷಾರಾಮಿ ಮತ್ತು ಕೆಲವು ಸರಕುಗಳಿಗೆ ೪೦% ದರವು ಸೆಪ್ಟೆಂಬರ್ ೨೨ ರಿಂದ ಜಾರಿಗೆ ಬರಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಕೌನ್ಸಿಲ್ ಈ ಸುಧಾರಣೆಗಳನ್ನು ಸರ್ವಾನುಮತದಿಂದ ಅನುಮೋದಿಸಿದೆ. ಈ ಬದಲಾವಣೆಯಿಂದ ತುಪ್ಪ, ಕೆಚಪ್, ಕಾಫಿ, ಪನೀರ್, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಔಷಧಿಗಳಂತಹ ವಸ್ತುಗಳು ಅಗ್ಗವಾಗಲಿವೆ. ಹಬ್ಬದ ಋತುವಿನಲ್ಲಿ ಇದು ಬಳಕೆ ಹೆಚ್ಚಳಕ್ಕೆ ಕಾರಣವಾಗುವ ನಿರೀಕ್ಷೆಯಿದೆ.

