ಹೆಚ್ಚುತ್ತಿರುವ ಜನಸಂಖ್ಯೆ, ಕುಸಿಯುತ್ತಿರುವ ಆಹಾರ ಉತ್ಪಾದನೆ; ಕೃಷಿ ವಿವಿಗಳು ಪರಿಹಾರ ಹುಡುಕಲಿ: ಸಿಎಂ ಸಿದ್ದರಾಮಯ್ಯ

Spread the love

ಧಾರವಾಡ ಕೃಷಿ ಮೇಳಕ್ಕೆ ಸಿಎಂ ಚಾಲನೆ: ಕೃಷಿ ವಿವಿಗಳು ‘ಲ್ಯಾಂಡ್ ಟು ಲ್ಯಾಬ್’ ಮಾದರಿ ಅನುಸರಿಸಲಿ

ಧಾರವಾಡ: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಆಗುತ್ತಿಲ್ಲ. ಹಸಿರು ಕ್ರಾಂತಿಯ ವೇಗ ಈಗ ಕುಂಠಿತಗೊಂಡಿದ್ದು, ಈ ಬಗ್ಗೆ ಕೃಷಿ ವಿಶ್ವವಿದ್ಯಾಲಯಗಳು ಗಂಭೀರ ಅಧ್ಯಯನ ನಡೆಸಿ, ರೈತಸ್ನೇಹಿ ಪರಿಹಾರಗಳನ್ನು ಕಂಡುಕೊಳ್ಳಬೇಕು. ವಿವಿಗಳು ಕೇವಲ ‘ಲ್ಯಾಬ್ ಟು ಲ್ಯಾಂಡ್’ಗೆ ಸೀಮಿತವಾಗದೆ, ‘ಲ್ಯಾಂಡ್ ಟು ಲ್ಯಾಬ್’ (ರೈತರ ಹೊಲದಿಂದ ಪ್ರಯೋಗಾಲಯಕ್ಕೆ) ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿ ಮೇಳ-2025ಕ್ಕೆ ಚಾಲನೆ ನೀಡಿ, ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಆಹಾರಕ್ಕಾಗಿ ಪರದಾಡುತ್ತಿದ್ದ ನಾವು, ಹಸಿರು ಕ್ರಾಂತಿಯ ಬಳಿಕ ಸ್ವಾವಲಂಬನೆ ಸಾಧಿಸಿ ರಫ್ತು ಮಾಡುವ ಮಟ್ಟಕ್ಕೆ ಬೆಳೆದೆವು. ಆದರೆ, ಇತ್ತೀಚೆಗೆ ಫಲವತ್ತತೆ ಕಡಿಮೆಯಾಗಿ ಆಹಾರ ಉತ್ಪಾದನೆ ಕುಸಿಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಕಾರಣಗಳನ್ನು ಪತ್ತೆಹಚ್ಚಲು ಕೃಷಿ ವಿವಿಗಳು ಹೆಚ್ಚಿನ ಸಂಶೋಧನೆ ನಡೆಸಬೇಕು. ಇದಕ್ಕೆ ಅಗತ್ಯವಿರುವ ಸಂಪೂರ್ಣ ಆರ್ಥಿಕ ನೆರವನ್ನು ಸರ್ಕಾರ ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.

ಮಳೆ ಆಶ್ರಿತ ಕೃಷಿಗೆ ಒತ್ತು:
ಕರ್ನಾಟಕದಲ್ಲಿ ಶೇ. 60ರಷ್ಟು ಭೂಮಿ ಮಳೆ ಆಶ್ರಿತವಾಗಿದೆ. ಕಡಿಮೆ ಮಳೆಯಲ್ಲೂ ಉತ್ತಮ ಇಳುವರಿ ನೀಡುವ ಹಾಗೂ ಇಂತಹ ಭೂಮಿಗೆ ಒಗ್ಗುವ ಹೊಸ ತಳಿಯ ಬೀಜಗಳನ್ನು ಸಂಶೋಧಿಸಬೇಕು. ಈ ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಸೂಚಿಸಿದರು. ಹಿಂದೆ ಗ್ರಾಮಗಳಲ್ಲಿ ರೈತರಿಗೆ ನೆರವಾಗಲು ಗ್ರಾಮ ಸಹಾಯಕರಿದ್ದರು, ಈಗ ಅವರ ಸಂಖ್ಯೆ ಕಡಿಮೆಯಾಗಿದೆ. ಈ ವ್ಯವಸ್ಥೆಯನ್ನು ಪುನಃ ಬಲಪಡಿಸುವಂತೆ ಕೃಷಿ ಸಚಿವರಿಗೆ ವೇದಿಕೆಯಲ್ಲೇ ಸೂಚನೆ ನೀಡಿದರು.
ಹೈನುಗಾರಿಕೆಯಲ್ಲಿ ನಂ.1 ಗುರಿ:
ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶಕ್ಕೆ ಎರಡನೇ ಸ್ಥಾನದಲ್ಲಿದ್ದು, ಪ್ರತಿದಿನ ಒಂದು ಕೋಟಿ ಲೀಟರ್ ಹಾಲು ಉತ್ಪಾದಿಸುತ್ತಿದೆ. ಶೀಘ್ರದಲ್ಲೇ ಗುಜರಾತ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದರೂ ಅಚ್ಚರಿಯಿಲ್ಲ. ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

ಡಿಸಿ ಕಾರ್ಯಕ್ಕೆ ಸಿಎಂ ಶ್ಲಾಘನೆ:
ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾದ ಬೆಳೆ ಹಾನಿ ಸಮೀಕ್ಷೆಯನ್ನು ರಾಜ್ಯದಲ್ಲೇ ಪ್ರಥಮವಾಗಿ ಮತ್ತು ಅತ್ಯಂತ ಕಾಳಜಿಯಿಂದ ಪೂರ್ಣಗೊಳಿಸಿದ ಧಾರವಾಡ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಕಾರ್ಯವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿ, ಅಭಿನಂದಿಸಿದರು.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, “ಧಾರವಾಡ ಕೃಷಿ ಮೇಳವು ಉತ್ತರ ಕರ್ನಾಟಕದ ರೈತರ ಪಾಲಿನ ಜಾತ್ರೆಯಾಗಿದೆ. ನಮ್ಮ ಸರ್ಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ. ಸಿರಿಧಾನ್ಯಗಳನ್ನು ಖರೀದಿಸಿ ಪಡಿತರದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.

ಜಿಲ್ಲಾ ಉಸ್ತುವಾರಿ ಸಚಿವ
ಸಂತೋಷ ಲಾಡ್ ಮಾತನಾಡಿ, “ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ 55 ಸಾವಿರ ಕೋಟಿ ರೂ. ವ್ಯಯಿಸಿದರೂ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಾಗಿಲ್ಲ. ಕೃವಿವಿ ಸಂಶೋಧನೆಗಳು ಹೆಚ್ಚಿನ ರೈತರಿಗೆ ತಲುಪಿ ಇಳುವರಿ ಹೆಚ್ಚಾಗಬೇಕು” ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, “ವಿಜ್ಞಾನಿಗಳ ಸಂಶೋಧನೆಗಳು ರೈತರನ್ನು ತಲುಪಿದಾಗ ಮಾತ್ರ ಕೃಷಿ ವಿವಿಗಳು ಯಶಸ್ವಿಯಾಗುತ್ತವೆ. ರೈತರ ಜೀವನ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು” ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ‘ಕೃಷಿಧಾರೆ’ ಎಂಬ ನೂತನ ಆ್ಯಪ್ ಬಿಡುಗಡೆ ಮಾಡಿದರು. ಪ್ರಗತಿಪರ ರೈತರು ಮತ್ತು ಕೃಷಿ ಮಹಿಳೆಯರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಸಕರಾದ ಎನ್.ಎಚ್. ಕೋನರಡ್ಡಿ, ಅಬ್ಬಯ್ಯ ಪ್ರಸಾದ, ಅಶೋಕ ಪಟ್ಟಣ, ವಿಜಯಾನಂದ ಕಾಶಪ್ಪನವರ, ಜಿಲ್ಲಾಧಿಕಾರಿ ದಿವ್ಯಾ ಪ್ರಭು ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಸ್ವಾಗತಿಸಿದರು.

Leave a Reply

Your email address will not be published. Required fields are marked *