
ಗ್ರೇಟರ್ ನೋಯ್ಡಾ: ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸಿ, ಕೌಟುಂಬಿಕ ಕಿರುಕುಳ ನೀಡಿದ ಪರಿಣಾಮವಾಗಿ ಪತಿ ಮತ್ತು ಆತನ ಕುಟುಂಬದ ಸದಸ್ಯರು 26 ವರ್ಷದ ಯುವತಿಯೊಬ್ಬಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಅಘಾತಕಾರಿ ಘಟನೆ ಇಲ್ಲಿನ ಸಿರ್ಸಾ ಗ್ರಾಮದಲ್ಲಿ ನಡೆದಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಪತಿ ವಿಪಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ಮೃತ ಯುವತಿಯನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ವಿಪರೀತ ಸುಟ್ಟ ಗಾಯಗಳೊಂದಿಗೆ ಆಕೆಯನ್ನು ಗ್ರೇಟರ್ ನೋಯ್ಡಾದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, 2016ರಲ್ಲಿ ನಿಕ್ಕಿ ವಿಪಿನ್ ಎಂಬಾತನನ್ನು ವಿವಾಹವಾಗಿದ್ದಳು. ನಿಕ್ಕಿಯ ಸಹೋದರಿ ಕಾಂಚನ ನೀಡಿರುವ ದೂರಿನ ಅನ್ವಯ, ಮದುವೆ ಸಮಯದಲ್ಲಿ ಬ್ರಾಂಡೆಡ್ ಎಸ್.ಯು.ವಿ. ಮತ್ತು ಇನ್ನಿತರ ದುಬಾರಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೂ, ವಿಪಿನ್ ಮತ್ತು ಆತನ ಕುಟುಂಬದವರು ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಡುತ್ತಲೇ ಬಂದಿದ್ದರು.
₹35 ಲಕ್ಷ ಮತ್ತು ಇನ್ನೊಂದು ಕಾರು ಕೇಳಿದ ಆರೋಪಿಗಳು:
“ಮದುವೆಯ ನಂತರವೂ ನನ್ನ ಸಹೋದರಿಗೆ ಅವಳ ಗಂಡ ಮತ್ತು ಆತನ ಕುಟುಂಬದವರು ಕಿರುಕುಳ ನೀಡುತ್ತಲೇ ಇದ್ದರು. ಇತ್ತೀಚೆಗೆ ಅವರು ₹35 ಲಕ್ಷ ನಗದು ಮತ್ತು ಮತ್ತೊಂದು ಕಾರು ಕೊಡುವಂತೆ ಒತ್ತಾಯಿಸುತ್ತಿದ್ದರು. ಈ ಬೇಡಿಕೆ ಈಡೇರಿಸಿದ್ದರೂ, ಅವರ ಕಿರುಕುಳ ನಿರಂತರವಾಗಿತ್ತು,” ಎಂದು ಕಾಂಚನ ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಪತಿ ವಿಪಿನ್, ಆತನ ತಾಯಿ, ತಂದೆ ಮತ್ತು ಚಿಕ್ಕಪ್ಪ ಸೇರಿದಂತೆ ಒಟ್ಟು ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಮುಖ ಆರೋಪಿ ವಿಪಿನ್‌ನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

