
ಕುಂದಗೋಳ: ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಶ್ರೀ ಮರಿಯಮ್ಮದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ “ಶರನ್ನವರಾತ್ರಿ” ಅಂಗವಾಗಿ ಅದ್ದೂರಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 22, ಸೋಮವಾರದಿಂದ (ಘಟಸ್ಥಾಪನೆ) ಆರಂಭವಾಗುವ ಈ ಕಾರ್ಯಕ್ರಮಗಳು ವಿಜಯದಶಮಿಯ ದಿನವಾದ ಅಕ್ಟೋಬರ್ 2, ಗುರುವಾರದವರೆಗೆ ನಡೆಯಲಿವೆ.
ಈ ಹನ್ನೊಂದು ದಿನಗಳ ಕಾಲ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಈ ಕಾರ್ಯಕ್ರಮದ ಮುಖ್ಯ ಭಾಗವಾಗಿ ಪ್ರತಿದಿನ ಸಂಜೆ 7 ರಿಂದ ರಾತ್ರಿ 9 ಗಂಟೆಯವರೆಗೆ “ಶ್ರೀ ದೇವಿ ಮಹಾತ್ಮಯ” ಪುರಾಣ ಪ್ರವಚನ ಏರ್ಪಡಿಸಲಾಗಿದೆ. ಈ ಪುರಾಣ ಪ್ರವಚನವನ್ನು ಶ್ರೀ ವೀರೇಶ ಪ್ರಳಯಕಲ್ಮಠ, ಚಾಕಲಬ್ಬಿ ಅವರು ನೀಡಲಿದ್ದಾರೆ. ದಿವ್ಯ ಸಾನಿಧ್ಯವನ್ನು ಶ್ರೀ ವೇ.ಮೂ. ಮೃತ್ಯುಂಜಯ ಹಿರೇಮಠ, ಶಿರೂರ ಇವರು ವಹಿಸಲಿದ್ದು, ಪುರಾಣ ಪಠಣವನ್ನು ಶ್ರೀ ಪರಮೇಶ್ವರ ಯಲವಿಗಿ, ಲಕ್ಷ್ಮೇಶ್ವರ ಅವರು ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮಕ್ಕೆ ಸಂಗೀತ ಸೇವೆಗಾಗಿ ಶ್ರೀ ನಿಂಗಪ್ಪ ಮಡಿವಾಳರ ಮತ್ತು ಶ್ರೀ ಶಿವಣ್ಣ ಗಾಣಿಗೇರ (ಹಾರ್ಮೋನಿಯಂ) ಹಾಗೂ ಶ್ರೀ ಶಿವಕುಮಾರ ಹನಮಂತಪ್ಪ ಅರ್ಕಸಾಲಿ, ಹುಬ್ಬಳ್ಳಿ (ತಬಲಾ) ಭಾಗವಹಿಸಲಿದ್ದಾರೆ.
ಪ್ರತಿದಿನ ಶ್ರೀ ಮರಿಯಮ್ಮದೇವಿಗೆ ಮಹಾಅಭಿಷೇಕ ಹಾಗೂ ಮಹಾಮಂಗಳಾರತಿ ಜರುಗಲಿದೆ.
ಪಂಚಾಮೃತ ಅಭಿಷೇಕದಲ್ಲಿ ಪಾಲ್ಗೊಳ್ಳಲು ಬಯಸುವ ಭಕ್ತಾದಿಗಳು ತಮ್ಮ ಹೆಸರನ್ನು ದೇವಸ್ಥಾನ ಸಮಿತಿಯಲ್ಲಿ ನೋಂದಾಯಿಸಬೇಕೆಂದು ಕೋರಲಾಗಿದೆ. ಸಮಸ್ತ ಶಿರೂರ ಗ್ರಾಮದ ಮಂಡಳಿಗಳು ಹಾಗೂ ಶ್ರೀ ಮರಿಯಮ್ಮದೇವಿ ದೇವಸ್ಥಾನದ ಸಮಿತಿಯ ಸದಸ್ಯರು ಈ ಪುರಾಣ ಕಾರ್ಯಕ್ರಮಕ್ಕೆ ಎಲ್ಲ ಸದ್ಭಕ್ತರೂ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆಯಬೇಕೆಂದು ವಿನಂತಿಸಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲ ಭಕ್ತರಿಗೂ ಪ್ರೀತಿಯ ಸ್ವಾಗತವಿದೆ.

