ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ ಘೋಷಣೆ

Spread the love

ಬೆಂಗಳೂರಿನಲ್ಲಿ ‘ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು ಮತ್ಸ್ಯ ಮೇಳ’ ಉದ್ಘಾಟನೆ; ರಾಜ್ಯ ಮೀನು ಉತ್ಪಾದನೆಯಲ್ಲಿ 3ನೇ ಸ್ಥಾನ

ಬೆಂಗಳೂರು, ನವೆಂಬರ್ 22: ಮೀನುಗಾರಿಕಾ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಮೀನುಗಾರ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಮೀನುಗಾರಿಕಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

​ಅವರು ಇಂದು ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಮೀನುಗಾರಿಕೆ ಇಲಾಖೆಯು ಆಯೋಜಿಸಿದ್ದ “ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು 2025ರ ಮತ್ಸ್ಯ ಮೇಳ”ವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಉತ್ತಮ ನಿರ್ವಹಣೆಗೆ ಸಚಿವರ ಪ್ರಶಂಸೆ:

​ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮೀನುಗಾರಿಕಾ ಇಲಾಖೆ ಮತ್ತು ಮೀನುಗಾರ ಕುಟುಂಬಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕರಾವಳಿಯವರೇ ಆದ ಮಂಕಾಳ ವೈದ್ಯ ಅವರನ್ನೇ ಮಂತ್ರಿಯನ್ನಾಗಿ ಮಾಡಲಾಗಿದೆ. ಅವರು ಉತ್ತಮವಾಗಿ ಇಲಾಖೆಯನ್ನು ನಿರ್ವಹಿಸುತ್ತಿದ್ದು, ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಮೀನುಗಾರಿಕಾ ಪ್ರಗತಿ ಮತ್ತು ಯೋಜನೆಗಳು:

​ರಾಜ್ಯವು ಸುಮಾರು 320 ಕಿ.ಮೀ. ಕರಾವಳಿ ಪ್ರದೇಶವನ್ನು ಹಾಗೂ 5.5 ಲಕ್ಷ ಹೆಕ್ಟೇರ್ ಒಳನಾಡು ಜಲಪ್ರದೇಶವನ್ನು ಹೊಂದಿದೆ. ಮೀನು ರಫ್ತಿನಲ್ಲಿ ರಾಜ್ಯವು ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಒಟ್ಟಾರೆ ಮೀನು ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ರಾಜ್ಯದ ಮೀನುಗಾರಿಕೆಯು ಸುಮಾರು 10 ಲಕ್ಷ ಜನರ ಜೀವನಕ್ಕೆ ಆಸರೆಯಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

​ಮೀನುಗಾರರ ಏಳಿಗೆಗಾಗಿ ಸರ್ಕಾರದ ಕ್ರಮಗಳನ್ನು ಪ್ರಸ್ತಾಪಿಸಿದ ಅವರು, ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾಂತ್ರೀಕೃತ ದೋಣಿಗಳ ಡೀಸೆಲ್ ವಾರ್ಷಿಕ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್‌ನಿಂದ 2 ಲಕ್ಷ ಕಿಲೋ ಲೀಟರ್‌ಗೆ ಹೆಚ್ಚಿಸಲಾಗಿದೆ. ಅಲ್ಲದೆ, ನಾಡ ದೋಣಿಗಳಿಗೆ ಕೈಗಾರಿಕಾ ಸೀಮೆಎಣ್ಣೆಯನ್ನು ಪ್ರತಿ ಲೀಟರ್‌ಗೆ 35 ರೂ. ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ, ಮೀನುಗಾರ ಸಮುದಾಯದ ಏಳಿಗೆಗೆ ಪ್ರತಿ ಬಜೆಟ್‌ನಲ್ಲೂ ಸರ್ಕಾರ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

​ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಸಚಿವರಾದ ಬೈರತಿ ಸುರೇಶ್, ಮಂಕಾಳು ವೈದ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *