ಪತ್ರಿಕಾ ವಿತರಕರ ಕಷ್ಟಕ್ಕೆ ಕಿವಿಯಾಗಲಿ ಸರ್ಕಾರ: ಕಲ್ಯಾಣ ಯೋಜನೆಗೆ ಆಗ್ರಹ

Spread the love

ಹುಬ್ಬಳ್ಳಿ: ನಗರದ ಪತ್ರಿಕಾ ವಿತರಕರ ಒಕ್ಕೂಟವು ಗುರುವಾರ ನಗರದ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಕಚೇರಿಯ ಕಬ್ಬೂರ್ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು. ಈ ಸಂದರ್ಭದಲ್ಲಿ, ವಿತರಕರು ತಮ್ಮ ವೃತ್ತಿ ಬದುಕಿಗೆ ಸಹಕಾರ ನೀಡುತ್ತಿರುವ ಪ್ರಮುಖ ದಿನಪತ್ರಿಕೆಗಳ ಪ್ರಸಾರಾಂಗ ವ್ಯವಸ್ಥಾಪಕರು ಹಾಗೂ ಪತ್ರಿಕಾ ಪ್ರತಿನಿಧಿಗಳನ್ನು ಹೂಗುಚ್ಛ ನೀಡಿ ಗೌರವಿಸಿದರು. ಈ ಸಹಕಾರದ ಮನೋಭಾವವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಂತರ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ದಿನಾಚರಣೆಯನ್ನು ನೆರವೇರಿಸಲಾಯಿತು.

ನಮ್ಮ ಬದುಕು ಅನಿಶ್ಚಿತ, ಸರ್ಕಾರಕ್ಕೆ ನಮ್ಮ ಬಗ್ಗೆ ಕಾಳಜಿ ಇಲ್ಲ!” – ಮನೋಹರ ಪಾರ್ವತೇಕರ

ದಿನಾಚರಣೆ ಸಮಯದಲ್ಲಿ ಪತ್ರಿಕಾ ವಿತರಕರ ನೋವುಗಳ ಬಗ್ಗೆ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಮನೋಹರ ಪಾರ್ವತೇಕರ ಅವರು ಮಾಧ್ಯಮಗಳ ಮುಂದೆ ತಮ್ಮ ಸಮುದಾಯದ ಬವಣೆಯನ್ನು ತೆರೆದಿಟ್ಟರು.
ಮಳೆ, ಗಾಳಿ, ಚಳಿ, ಬಿಸಿಲು ಲೆಕ್ಕಿಸದೆ ವರ್ಷದ 365 ದಿನವೂ ನಸುಕಿನಲ್ಲಿ ಜನರಿಗೆ ಸುದ್ದಿಯನ್ನು ತಲುಪಿಸುವ ಪತ್ರಿಕಾ ವಿತರಕರ ಸಮುದಾಯದ ಶ್ರಮದ “ನಮ್ಮ ಬದುಕು ಅತ್ಯಂತ ಅನಿಶ್ಚಿತತೆಯಿಂದ ಕೂಡಿದೆ. ಅಪಘಾತಗಳಾದಾಗ, ಆರೋಗ್ಯ ಸಮಸ್ಯೆಗಳು ಎದುರಾದಾಗ ನಮ್ಮ ನೆರವಿಗೆ ಯಾರೂ ಇಲ್ಲ. ಸರ್ಕಾರದಿಂದ ಯಾವುದೇ ಆರೋಗ್ಯ ವಿಮೆ, ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಅಥವಾ ಓಡಾಡಲು ಸಾರಿಗೆ ವ್ಯವಸ್ಥೆ ಇಲ್ಲ. ನಮ್ಮ ಶ್ರಮ ಮತ್ತು ಬದುಕು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ದುರದೃಷ್ಟಕರ” ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

“ಪ್ರತಿದಿನ ಲಕ್ಷಾಂತರ ಮನೆಗಳಿಗೆ ಜ್ಞಾನದ ಕಿಡಿಯನ್ನು ತಲುಪಿಸುವ ನಮ್ಮನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಸರ್ಕಾರವು ನಮ್ಮನ್ನು ಕೇವಲ ವೃತ್ತಿಪರ ನೌಕರರಾಗಿ ಪರಿಗಣಿಸದೆ, ಸಮಾಜಕ್ಕೆ ಮಾಹಿತಿ ತಲುಪಿಸುವ ಬೆನ್ನೆಲುಬಿನ ಶಕ್ತಿ ಎಂದು ಅರಿತು, ತಕ್ಷಣವೇ ಪತ್ರಿಕಾ ವಿತರಕರ ಕಲ್ಯಾಣಕ್ಕಾಗಿ ಆರೋಗ್ಯ ವಿಮೆ, ಶಿಕ್ಷಣ ಸಹಾಯ ಮತ್ತು ಸಾರಿಗೆ ಭತ್ಯೆಯಂತಹ ಯೋಜನೆಗಳನ್ನು ಜಾರಿಗೊಳಿಸಬೇಕು” ಎಂದು ಅವರು ಸರ್ಕಾರ ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಆಗ್ರಹಿಸಿದರು. ಪತ್ರಿಕಾ ವಿತರಕರ ಈ ಕಠಿಣ ಬೇಡಿಕೆಗಳು ಸರ್ಕಾರ ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳ ಗಮನಕ್ಕೆ ತಕ್ಷಣ ಬರಬೇಕಿದ್ದು, ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಸಮುದಾಯವು ಒಕ್ಕೊರಲಿನಿಂದ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ವಿವಿಧ ಪತ್ರಿಕೆಗಳ ಪ್ರಸಾರಾಂಗ ವಿಭಾಗದ ಅಧಿಕಾರಿಗಳು, ಹುಬ್ಬಳ್ಳಿ ನಗರದ ನೂರಾರು ವಿತರಕರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ರಮೇಶ್ ಜಿತೂರಿ, ಹನುಮಂತ ಮೆಣಸಿಕಾಯಿ, ಜಗನ್ನಾಥ್ ಕಠಾರೆ, ವಿನೋದ್, ರತನ್, ರಾಘವೇಂದ್ರ ಮತ್ತು ವಿನಯ್ ಡಗೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *