
ಬೆಳಗಾವಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೋಕ್ಸೋ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಗಲ್ಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಿದೆ.
ರಾಯಬಾಗ ತಾಲೂಕಿನ ಗ್ರಾಮವೊಂದರಲ್ಲಿ 2019ರ ಸೆಪ್ಟೆಂಬರ್ 10ರಂದು ನಡೆದಿದ್ದ ಈ ಭೀಕರ ಕೃತ್ಯಕ್ಕೆ ಸಂಬಂಧಿಸಿ, ಅಪರಾಧಿ ಭರತೇಶ ರಾವಸಾಹೇಬ ಮಿರ್ಜಿ ಎಂಬಾತನಿಗೆ ಜಿಲ್ಲಾ ಘನ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ?
2019ರ ಅಕ್ಟೋಬರ್ 15ರಂದು 8 ವರ್ಷದ ಬಾಲಕಿ ಚಾಕೊಲೇಟ್ ತರಲು ಅಂಗಡಿಗೆ ಹೋಗಿದ್ದಳು. ಈ ವೇಳೆ ಪಾಪಿ ಭರತೇಶ ಮಿರ್ಜಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಬಾಲಕಿ ಕಿರುಚಾಡಿದ್ದರಿಂದ ಕುತ್ತಿಗೆ ಹಿಸುಕಿ ಸಾಯಿಸಿದ್ದ. ನಂತರ ಸಾಕ್ಷ್ಯ ನಾಶಪಡಿಸಲು 20 ಕೆಜಿ ತೂಕದ ಕಲ್ಲನ್ನು ಸೀರೆಯಿಂದ ಬಾಲಕಿಯ ದೇಹಕ್ಕೆ ಕಟ್ಟಿ, ತನ್ನ ಮನೆ ಬಳಿಯಿದ್ದ ತೆರೆದ ಬಾವಿಯೊಂದಕ್ಕೆ ಎಸೆದಿದ್ದ.
ಬಾಲಕಿ ಕಾಣೆಯಾದ ಬಗ್ಗೆ ಪಾಲಕರು ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಕುಡಚಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಜೆ.ಎಸ್. ಉಪ್ಪಾರ ಅವರು, ಶ್ವಾನದಳದ ನೆರವಿನಿಂದ ಬಾವಿಯೊಳಗಿದ್ದ ಬಾಲಕಿಯ ದೇಹವನ್ನು ಪತ್ತೆ ಮಾಡಿದ್ದರು. ನಂತರದ ತನಿಖಾಧಿಕಾರಿಗಳಾದ ಎನ್. ಮಹೇಶ ಮತ್ತು ಕೆ.ಎಸ್. ಹಟ್ಟಿ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪೋಷಕರಿಗೆ ₹10 ಲಕ್ಷ ಪರಿಹಾರ
ಅಪರಾಧಿ ಭರತೇಶ ಮಿರ್ಜಿಗೆ ಗಲ್ಲು ಶಿಕ್ಷೆಯ ಜೊತೆಗೆ ₹7 ಲಕ್ಷ 45 ಸಾವಿರ ದಂಡವನ್ನೂ ವಿಧಿಸಲಾಗಿದ್ದು, ದಂಡ ಪಾವತಿಗೆ ತಪ್ಪಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಅಲ್ಲದೇ, ಸಂತ್ರಸ್ತೆಯ ಪೋಷಕರಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ₹10 ಲಕ್ಷ ಪರಿಹಾರ ಒದಗಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಅವರು ವಾದ ಮಂಡಿಸಿದ್ದರು. ಪ್ರಕರಣ ಭೇದಿಸಲು ಸಹಕರಿಸಿದ ಅಧಿಕಾರಿಗಳ ಕಾರ್ಯವನ್ನು ನ್ಯಾಯಾಧೀಶರು ಪ್ರಶಂಸಿಸಿದ್ದಾರೆ.

