ಗಾಂಧೀಜಿ, ಶಾಸ್ತ್ರೀಜಿ ಚಿಂತನೆಗಳು ಇಂದಿಗೂ ಪ್ರಸ್ತುತ: ಬಸವಪ್ರಭು ಹೊಸಕೇರಿ

Spread the love

ಕವಿಸಂನಲ್ಲಿ ರಾಷ್ಟ್ರಪಿತ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

ಧಾರವಾಡ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಮಹಾನ್ ಮಾನವತಾವಾದಿಗಳು. ಅವರ ಸ್ಮರಣೆ ಪುಣ್ಯದ ಕಾರ್ಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ (ಕವಿಸಂ) ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಹೇಳಿದರು.

​ಕವಿಸಂನಲ್ಲಿ ಗುರುವಾರ (ಅ.೨) ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

​ಗಾಂಧೀಜಿಯವರ ಚಿಂತನೆಗಳನ್ನು ಯುವಜನತೆಯಲ್ಲಿ ಬಿಂಬಿಸಲು ಕವಿಸಂ ವತಿಯಿಂದ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭವಿಷ್ಯದಲ್ಲಿ ದೇಶಕ್ಕಾಗಿ ಹೋರಾಡಿದ ಮಹಾನ್ ನಾಯಕರ ಬಗ್ಗೆಯೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ದಿವ್ಯಶಕ್ತಿ: ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರೀ ಇಬ್ಬರೂ ಸಹ ಸರಳ ಜೀವನ ನಡೆಸಿ ಉನ್ನತ ಚಿಂತನೆಗಳನ್ನು ಹೊಂದಿದವರು. ಇವರಿಬ್ಬರೂ ಕೇವಲ ವ್ಯಕ್ತಿಗಳಲ್ಲ, ಬದಲಿಗೆ ದಿವ್ಯಶಕ್ತಿ. ಇವರು ಸತ್ಯ, ಪ್ರಾಮಾಣಿಕತೆ ಮತ್ತು ನೈತಿಕತೆಯ ಮೇರು ವ್ಯಕ್ತಿಗಳಾಗಿದ್ದು, ಇವರ ಚಿಂತನೆಗಳು ಮನುಕುಲದ ಮೇಲೆ ಗಾಢ ಪ್ರಭಾವ ಬೀರಿವೆ ಎಂದು ಹೊಸಕೇರಿ ಬಣ್ಣಿಸಿದರು.

ಗಾಂಧೀ ತತ್ವಗಳೇ ಪರಿಹಾರ: ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಛಾಯಾಚಿತ್ರಗ್ರಾಹಕ ಶಶಿ ಸಾಲಿ, ಇಂತಹ ಪ್ರಾತಃಸ್ಮರಣೀಯರ ಜೀವನ ಸಾಧನೆ ಕುರಿತು ಕವಿಸಂನಲ್ಲಿ ಚಿಂತನೆಗಳನ್ನು ಆಯೋಜಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು. ಇಂದಿನ ಯುವಕರು ಕವಲು ದಾರಿಯಲ್ಲಿದ್ದು, ಗಾಂಧೀಜಿಯವರ ತತ್ವಗಳೇ ಅವರಿಗೆ ಪರಿಹಾರ ಒದಗಿಸಬಲ್ಲವು ಎಂದು ಅಭಿಪ್ರಾಯಪಟ್ಟರು.

ಸಂಕೀರ್ಣ ಪರಿಸ್ಥಿತಿಗೆ ಹೆಚ್ಚು ಪ್ರಸ್ತುತ: ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಚಿಂತನೆಗಳು ಹಿಂದಿಗಿಂತ ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಹೆಚ್ಚು ಪ್ರಸ್ತುತ. ಇಬ್ಬರೂ ವಿಶ್ವ ಮಾನವ ಚಿಂತನೆ ಹೊಂದಿದ ವ್ಯಕ್ತಿಗಳು ಎಂದು ಹೇಳಿದರು.

​ಈ ವೇಳೆ, ದಿನಕರ ದೇಸಾಯಿ ಅವರು ಗಾಂಧೀಜಿಯವರ ಕುರಿತಾಗಿ ರಚಿಸಿದ ‘ನಿನ್ನ ಪ್ರತಿಮೆಯ ನಿಲ್ಲಿಸಿ ನಾವು ಮೆರೆವುದು ವ್ಯರ್ಥ’ ಕವನವನ್ನು ಬಸವಲಿಂಗಯ್ಯ ಹಿರೇಮಠ ಅವರು ಹಾಡಿದ ಧ್ವನಿಸುರುಳಿಯನ್ನು ಆಲಿಸಲಾಯಿತು.

ಸ್ವಾಗತ ಮತ್ತು ವಂದನೆ: ಶಂಕರ ಹಲಗತ್ತಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ನಿರೂಪಿಸಿದರು. ಸತೀಶ ತುರಮರಿ ಅವರು ವಂದಿಸಿದರು.

​ಕಾರ್ಯಕ್ರಮದಲ್ಲಿ ವೀರಣ್ಣ ಒಡ್ಡೀನ, ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ, ಡಾ. ಧನವಂತ ಹಾಜವಗೋಳ, ಈಶ್ವರಚಂದ್ರ ಹೊಸಮನಿ, ಬಿ.ಕೆ. ಹೊಂಗಲ್, ಶಿ.ಮ. ರಾಚಯ್ಯನವರ ಸೇರಿದಂತೆ ಕವಿಸಂನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *