ಧರ್ಮಸ್ಥಳ ಗ್ರಾಮಭಿವೃದ್ದಿ ಸಂಸ್ಥೆ ವತಿಯಿಂದ ಮುಕ್ತ ಸಮಾಜ ನಿರ್ಮಾಣಕ್ಕಾಗಿ ನವಲಗುಂದದಲ್ಲಿ ಗಾಂಧಿ ಸ್ಮೃತಿ, ಜಾಥಾ

Spread the love

ನವಲಗುಂದ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 156ನೇ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಪುರಸಭೆ ನವಲಗುಂದ ಇವರ ಸಹಯೋಗದೊಂದಿಗೆ ಗಾಂಧಿ ಸ್ಮೃತಿ, ವ್ಯಸನಮುಕ್ತರಿಗೆ ಅಭಿನಂದನೆ ಮತ್ತು ಜಾಥಾ ಕಾರ್ಯಕ್ರಮವು ಅ.11 ಶನಿವಾರ ಮುಂಜಾನೆ 11 ಗಂಟೆಗೆ ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಶೈವ-ಲಿಂಗಾಯತ ಸಮುದಾಯ ಭವನದಲ್ಲಿ ಜರುಗಲಿದೆ.

ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆ

ಮನಕವಾಡ ಗ್ರಾಮದ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ, ನವಲಗುಂದ ಗವಿಮಠದ ಅಭಿನವ ಬಸವಲಿಂಗ ಸ್ವಾಮೀಜಿ ಹಾಗೂ ಅಜಾತ ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವರು. ಶಾಸಕ ಎನ್. ಎಚ್. ಕೋನರಡ್ಡಿ ಕಾರ್ಯಕ್ರಮ ಉದ್ಘಾಟಿಸುವರು. ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಗದಗ ಜಿಲ್ಲಾಧ್ಯಕ್ಷ ಶಿವಾನಂದ ಬೆಂತೂರ ಅಧ್ಯಕ್ಷತೆ ವಹಿಸಲಿದ್ದಾರೆ.

ಅಭಿನಂದನೆ ಮತ್ತು ಆಶಯ ಭಾಷಣ

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಮಾಜಿ ಸಚಿವ ಕೆ. ಎನ್. ಗಡ್ಡಿ ಮತ್ತು ಡಾ. ಆರ್. ಬಿ. ಶಿರೆಯಣ್ಣವರ ಅವರು ನವಜೀವನ ಸದಸ್ಯರಿಗೆ ಅಭಿನಂದಿಸುವರು. ಧಾರವಾಡ ಜಿಲ್ಲಾ ಡಿವೈಎಸ್‌ಪಿ ವಿನೋದ ಮುಕ್ತೇದಾರ ಅವರು ಸಾಧಕರಿಗೆ ಅಭಿನಂದಿಸಲಿದ್ದಾರೆ. ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಅವರು ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬದಾಮಿ ಅವರಿಂದ ಆಶಯ ಭಾಷಣ ನಡೆಯಲಿದೆ.

ಮುಖ್ಯ ಅತಿಥಿಗಳು ಮತ್ತು ಗಣ್ಯರ ಉಪಸ್ಥಿತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗದಗ ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ಹಾಗೂ ನವಲಗುಂದ ತಹಶೀಲ್ದಾರ್ ಸುಧೀರ ಸಾಹುಕಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಮುಖ್ಯಾಧಿಕಾರಿ ಶರಣಪ್ಪ ಪೂಜಾರ, ಲಿಂಗರಾಜ ದೇಸಾಯಿ, ಲೋಕನಾಥ ಹೇಬಸೂರ, ಅಣ್ಣಪ್ಪ ಬಾಗಿ ಅತಿಥಿಗಳಾಗಿ ಭಾಗವಹಿಸುವರು. ಪುರಸಭಾ ಉಪಾಧ್ಯಕ್ಷೆ ಫರೀದಾಬೇಗಂ ಬಬರ್ಚಿ, ದಿನೇಶ ಶೇರಿಗಾರ, ನ್ಯಾಯವಾದಿ ವಿದ್ಯಾಧರ ಪಾಟೀಲ ಸೇರಿದಂತೆ ಪುರಸಭೆಯ ಎಲ್ಲ ಸದಸ್ಯರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿರುವರು.

ಜಾಥಾ ಮೆರವಣಿಗೆ ಮಾರ್ಗ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಧಾರವಾಡ ಮತ್ತು ಗದಗ ಜಿಲ್ಲೆ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಶನಿವಾರ ಬೆಳಿಗ್ಗೆ 9 ಗಂಟೆಗೆ ಗವಿಮಠದಿಂದ ಜಾಥಾ ಮೆರವಣಿಗೆ ಆರಂಭವಾಗಲಿದ್ದು, ಗಣೇಶ ದೇವಸ್ಥಾನ, ಗಾಂಧಿ ಸರ್ಕಲ್, ಅಂಗರಾಜ ಸರ್ಕಲ್, ಬಸ್ ಸ್ಟಾಂಡ್ ಮಾರ್ಗವಾಗಿ ಶ್ರೀ ವೀರಶೈವ ಲಿಂಗಾಯತ ಸಮುದಾಯ ಭವನಕ್ಕೆ ತಲುಪಲಿದೆ.

Leave a Reply

Your email address will not be published. Required fields are marked *