
ಕಲಘಟಗಿ: ತಾಲ್ಲೂಕಿನ ಗಳಗಿಹುಲಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಓ ಅಬ್ದುಲ್ ರಜಾಕ್ ಹೆಚ್ ಮನಿಯಾರ್, ಸರ್ಕಾರದ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ.
ಭ್ರಷ್ಟಾಚಾರದಲ್ಲಿ ತೊಡಗಿದ್ದ ಈ ಅಧಿಕಾರಿಯನ್ನು ಜಿಲ್ಲಾಡಳಿತ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಆಗಸ್ಟ್ 31ರಂದು ಗಳಗಿಹುಲಕೊಪ್ಪ ಗ್ರಾಮದಲ್ಲಿನ ವಿದ್ಯುತ್ ಬಿಲ್ ಪಾವತಿಯಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಸರ್ಕಾರದಿಂದ ಬಂದ ಹಣವನ್ನು ದುರುಪಯೋಗಪಡಿಸಿಕೊಂಡು, ಅದನ್ನು ಖಾಸಗಿ ಖಾತೆಗಳಿಗೆ ವರ್ಗಾವಣೆ ಮಾಡಿರುವ ಕುರಿತು ದಾಖಲೆಗಳು ಲಭ್ಯವಾಗಿವೆ.
ಈ ವಿಷಯ ಗಮನಕ್ಕೆ ಬಂದ ಕೂಡಲೇ, ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಭುವನೇಶ್ವರ ಅವರು ಈ ಕುರಿತು ತನಿಖೆ ನಡೆಸಿದರು. ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆ ನಡೆಸಿದಾಗ ಪಿಡಿಓ ಮನಿಯಾರ್ ಅವರ ಕೃತ್ಯ ಬಯಲಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಇಓ, ಅಬ್ದುಲ್ ರಜಾಕ್ ಹೆಚ್ ಮನಿಯಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಕ್ರಮವು ಸರ್ಕಾರದ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಜಿಲ್ಲಾಡಳಿತದ ಬದ್ಧತೆಯನ್ನು ತೋರಿದಂತಾಗಿದೆ.

