

ಕುಂದಗೋಳ,: ಪಟ್ಟಣದ ಪಿಎಲ್ಡಿ ಬ್ಯಾಂಕ್ ಆವರಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಮುಗಿಯುತ್ತಿದ್ದಂತೆ ರೈತರ ಅಸಮಾಧಾನ ಮತ್ತು ಆಕ್ರೋಶದ ಅಖಾಡವಾಯಿತು. “ರೈತರ ಹೆಸರಿನಲ್ಲಿ ನಡೆಯುವ ಬ್ಯಾಂಕ್ನಲ್ಲಿ ರೈತರಿಗೆ ಮಾತ್ರವೇ ನಿರ್ಲಕ್ಷ್ಯ” ಎಂದು ಸಭೆಯ ಮುಗಿಯುತ್ತಿದ್ದಂತೆ ಅನೇಕ ರೈತರು ಧ್ವನಿ ಎತ್ತಿದರು.
ಸಭೆಗೆ ಭಾಗವಹಿಸಿದ ಅನೇಕ ರೈತರು “ನಮಗೆ ಸಭೆಯ ಕುರಿತು ನೋಟಿಸ್ ಬಂದಿಲ್ಲ, ಬ್ಯಾಂಕಿನ ಸೌಲತ್ತುಗಳು ತಲುಪುತ್ತಿಲ್ಲ, ಸತ್ತವರ ಹೆಸರಿನ ಮೇಲೆಯೇ ನೋಟಿಸ್ ಕಳುಹಿಸಲಾಗಿದೆ, ರೈತರನ್ನು ಯಾವೊಬ್ಬರನ್ನೂ ಗೌರವಿಸುವುದಿಲ್ಲ. ಒಟ್ಟಾರೆ ರೈತರ ಹಿತದೃಷ್ಟಿ ಮರೆತು ಮನಬಂದಂತೆ ಆಡಳಿತ ನಡೆಸುತ್ತಾ, ತಮಗೆ ಬೇಕಾದವರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದ್ದಾರೆ” ಎಂದು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳನ್ನು ಖಡಕ್ ಪ್ರಶ್ನೆಗೊಳಪಡಿಸಿದರು.

ರೈತರ ಆಕ್ರೋಶದ ಘೋಷಣೆಗಳು
ರೈತ ಗುರುಪಾದಪ್ಪ ಸಾದ್ವಿ ಮಾತನಾಡಿ: “ನನ್ನ ತಂದೆ ಕಲ್ಲಪ್ಪ ಸಾದ್ವಿ 2023ರಲ್ಲಿ ತೀರಿಕೊಂಡಿದ್ದಾರೆ. ಅನೇಕ ಬಾರಿ ಬ್ಯಾಂಕ ಬಂದು ಸಂಬಂಧಿಸಿದ ಹಾಗೂ ಅಧಿಕಾರಿಗಳಿಗೆ ಭೇಟಿ ನೀಡಿ ಹೇಳಿದರು ಯಾರೊಬ್ಬರೂ ಇದನ್ನು ಸರಿಪಡಿಸದೆ ನಿರ್ಲಕ್ಷ್ಯ ವಹಿಸಿ, ಇಂದಿಗೂ ಅವರ ಹೆಸರಿನ ಮೇಲೆಯೇ ನೋಟಿಸ್ ಬರುತ್ತಿದೆ. ಹೀಗೆ ಇದನ್ನು ಸರಿ ಪಡಿಸದಿದ್ದರೆ ಕಾನೂನಾತ್ಮಕ ಹೋರಾಟ ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊರ್ವ ರೈತಶಿವರುದ್ರಪ್ಪ ಕುಸುಗಲ್ ಅಳಲನ್ನು ಹೊರಹಾಕುತ್ತಾ ಮಾತನಾಡಿ: “ನಾನು 40 ವರ್ಷಗಳಿಂದ ಸದಸ್ಯ. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಸಭೆಗೆ ಕರೆಯುವುದಿಲ್ಲ, ನೋಟಿಸ್ ಸಹ ಕಳಿಸಿಲ್ಲ. ಈ ಬ್ಯಾಂಕ್ನಿಂದ ನಿರಾಶನಾಗಿ ಸದಸ್ಯತ್ವವೇ ಕಿತ್ತುಕೊಳ್ಳಲು ನಿರ್ಧರಿಸಿದ್ದೇನೆ. ಸಾಲ ಕೇಳಿದರೆ ‘ಅಧ್ಯಕ್ಷರು ಇಲ್ಲ’ ನಾಳೆ ಬಾ ನಾಡದ್ದು ಬಾ ಎಂದು ಹೇಳುತ್ತಾರೆ. ನಾವು ದೂರದ ಹಳ್ಳಿಯಿಂದ ಬರಬೇಕು ನಮಗೆ ಒಡಾಡಕು ಬಹಳ ಖರ್ಚು ಆಗುತ್ತದೆ. ಇನ್ನು ಬೇರೆ ಬ್ಯಾಂಕ್ನಲ್ಲಿ ಹಣ ಇಟ್ಟರೆ ಬಡ್ಡಿಯಾದರೂ ಸಿಗುತ್ತದೆ” ಎಂದರು.

ರೈತ ಮಲ್ಲಿಕಾರ್ಜುನ ಗುರುವಿನಹಳ್ಳಿ ಗರಂ ಆಗಿ ಮಾತನಾಡುತ್ತಾ ಹೇಳಿದರು: “6500ಕ್ಕೂ ಹೆಚ್ಚು ಸದಸ್ಯರಿದ್ದರೂ ಮತದಾರರ ಪಟ್ಟಿಯಲ್ಲಿ ಅನೇಕರ ಹೆಸರುಗಳೇ ಇಲ್ಲ. ಎರಡು ಸಭೆಗೆ ಬಾರದಿದ್ದರೆ ಸ್ವಯಂ ಸದಸ್ಯತ್ವ ಹಾಗೂ ಮತದಾನ ರದ್ದು ಆಗುತ್ತದೆ ಎಂಬ ನಿಯಮ ಹಾಗೂ ಮತದಾರ ಪಟ್ಟಿಯಲ್ಲಿ ಕೆಲ ರೈತರ ಹೆಸರುಗಳಿಲ್ಲ ಇದರಿಂದ ಎಷ್ಟೋ ರೈತರಿಗೆ ಅನ್ಯಾಯವಾಗಿದೆ. ಹಾಗೂ ನೋಟಿಸ್ ಎಲ್ಲರಿಗೂ ತಲುಪಬೇಕು, ಕೇವಲ ಕಾರ್ಯಕಾರಿಣಿ ಅಥವಾ ಮಂಡಳಿಗೆ ಮಾತ್ರವಲ್ಲ. ಕಡಪಟ್ಟಿ, ಅಲ್ಲಾಪೂರ ಗ್ರಾಮದ ಸದಸ್ಯರಿಗೆ 40 ಮಂದಿಗೂ ನೋಟಿಸ್ ಬಂದಿಲ್ಲ. ನಾನು ಪೋಷ್ಟ್ಮಾನ್ಗೂ ಸಹ ಫೋನ್ ಮಾಡಿ ಕೇಳಿದ್ದೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮಂಜುನಾಥ ಯಲಿಗಾರ ಮಾತನಾಡಿ : “40 ವರ್ಷಗಳಿಂದ ದುಡಿದು ಸದಸ್ಯರಾಗಿದ್ದರೂ ಇಲ್ಲಿ ನಮಗೆ ಬೆಲೆ ಇಲ್ಲದಂತಾಗಿದೆ. ತಾರತಮ್ಯದ ಕೆಲಸ ಆಗುತ್ತಿದೆ. ಇಲ್ಲಿ ನಿಯತ್ತಿನ ರೈತರಿಗೆ ಬೆಲೆ ಇಲ್ಲದಂತಾಗಿದೆ” ಎಂದು ಅಸಮಾಧಾನ ಹೊರಹಾಕಿದರು.
ರೈತ ಪಕ್ಕೀರಪ್ಪ ಟಿ: ತಮ್ಮ ಅಳಲನ್ನು ಹಂಚಿಕೊಂಡು ಹೇಳಿದರು: “2016ರಲ್ಲಿ ಸಾಲ ತೆಗೆದುಕೊಂಡಿದ್ದು, ಈ ಸಾಲವನ್ನು ಮರುತುಂಬಿ 2025ರಲ್ಲೂ ಬಾಕಿ ಬೋಜಾ ಕಿತ್ತುಕೊಳ್ಳಲು ಬ್ಯಾಂಕಿಗೆ ಅನೇಕ ಬಾರಿ ಹೋದರೂ ಫಲವಾಗಿಲ್ಲ. ಕೆಲವರ ಮಾತು ಕೇಳಿ ಮಾತ್ರ ಸಾಲ ನೀಡುತ್ತಾರೆ, ನಿಯಮಾನುಸಾರ ತುಂಬಿದವರನ್ನು ಕಡೆಗಣಿಸುತ್ತಾರೆ” ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ರೈತ ಮುಖಂಡೆ ಹಾಗೂ ಕೃಷಿಕ ಸಮಾಜ ನವದೆಹಲಿ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ ಮಾತನಾಡಿ
ತಾಲೂಕಿನಲ್ಲಿ 6-7 ಸಾವಿರ ರೈತ ಸದಸ್ಯರಿದ್ದಾರೆ. ಆದರೆ ಸಭೆಗೆ ಹಾಜರಾಗಿದ್ದು ಕೇವಲ 200-300 ಮಂದಿ. ಇದು ದೊಡ್ಡ ದುರಂತ. ತಾಲೂಕಿನ ರೈತರು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಇಡೀ ವರ್ಷ ಮಳೆಯಿಂದ ರೈತ ಕಂಗಾಲಾಗಿದ್ದಾನೆ. ಇವತ್ತು ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ಮಾಡಬಹುದಿತ್ತಲ್ಲಾ, ಏಕೆ ಮಾಡಲಿಲ್ಲ?
ಕೆಲ ರೈತರ ಸದಸ್ಯತ್ವ ಸುಮ್ಮನೆ ರದ್ದು ಮಾಡಲಾಗಿದೆ. ಅವರ ಶೇರು ಹಣ ಎಲ್ಲಿ ಹೋಯಿತು? ಅವರಿಗೆ ಕರೆದು ಕೇಳದೇ ಹೇಗೆ ರದ್ದು ಮಾಡಬಹುದು? ಈ ಪ್ರಶ್ನೆಗೆ ಅಧ್ಯಕ್ಷೆ ಕಟಗಿ ಮತ್ತು ಬ್ಯಾಂಕ್ ಮ್ಯಾನೇಜರ್ ಉತ್ತರ ಕೊಡಲೇಬೇಕು. ಉತ್ತರ ಕೊಡುವವರೆಗೂ ನಾನು ಹಿಂಜರಿಯುವುದಿಲ್ಲ. ಹಾಗೂ ಇಂತಹ ಘಟನೆಗಳಿಂದ ನೊಂದು ಬೇರೆ ದಾರಿ ಇಲ್ಲದೆ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಾರೆ. ಇವತ್ತು ಸಹ ತರ್ಲಘಟ್ಟ ಗ್ರಾಮದ ಸಾಲ ಬಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂದು ಹೇಳಿದರು.
ಕೋಟ:ಮ್ಯಾನೇಜರ್ ಯಾಶಿನ್ ರಾಯಚೂರು ಮಾತನಾಡಿ: ನಾವು 1800 ಮಂದಿಗೆ ನೋಟಿಸ್ ಕಳಿಸಿದ್ದೇವೆ. ಹೆಚ್ಚಿನ ನೋಟಿಸ್ ತಲಿಪಿವೆ ಕೆಲವೊಂದು ತಲುಪುವಲ್ಲಿ ವಿಳಂಬವಾಗಿದೆ. ಹಾಗೂ ಮರಣ ಹೊಂದಿದ ರೈತರ ಹೆಸರು ಗಮನಕ್ಕೆ ಬಂದಿದೆ. ಅದನ್ನು ಸರಿಪಿಸುತ್ತೇವೆ. ಮುಂದೆ ಸಭೆ ಕರೆದು ರೈತರು ಮಾಡಿದ ಆರೋಪಗಳ ಬಗ್ಗೆ ಸಮಾಲೋಚಿಸಿ ಎಲ್ಲವನ್ನೂ ಸರಿಪಿಡಿಸುತ್ತೇವೆ ಎಂದು ಹೇಳಿದರು.
ಒಟ್ಟಾರೆಯಗಾಗಿ ರೈತರು ತಮ್ಮ ಸಮಸ್ಯೆ ಹೇಳಿಕೊಂಡರು ಇಷ್ಟೆಲ್ಲ ಗೊಂದಲಗಳ ನಡುವೆ ವಾರ್ಷಿಕ ಮಹಾಸಭೆಯನ್ನು ನೆರವೇರಿಸಿ ಕೈ ತೊಳೆದುಕೊಂಡ ಬ್ಯಾಂಕ ಅಧಿಕಾರಿಗಳು ರೈತರ ವಿಶ್ವಾಸವನ್ನು ಮತ್ತಷ್ಟು ಕಳೆದುಕೊಂಡಂತಾಗಿದೆ.
ಈ ಸಭೆಯಲ್ಲಿ ರಾಜ್ಯ ಬ್ಯಾಂಕಿನ ಉಪಾಧ್ಯಕ್ಷ ಉಳವಪ್ಪ ದಾಸನೂರ.ಅಧ್ಯಕ್ಷೆ ಹರ್ಶಿತಾ ಕಟಗಿ, ಉಪಾಧ್ಯಕ್ಷ: ಚಂದ್ರು ಕುರುಬರ, ನಿರ್ದೇಶಕ ರಾದ ಅರವಿಂದ ಎಮ್ ಕಟಗಿ, ಪ್ರಕಾಶ ಕುಬಿಹಾಳ, ಪ್ರಭುಗೌಡ ಸಖ್ಯಾಗೌಡಶ್ಯಾನಿ, ಕೆ ಆರ್ ಡಗಲಿ, ಮಲ್ಲಪ್ಪ ತಡಸದ, ಸಿದ್ದೇಶ್ವರ ನೇಗಿನಹಾಳ, ಈಶ್ವರಗೌಡ ಪಾಟೀಲ, ಈರಣ್ಣ ಮೇಲಮಾಳಗಿ, ಚೇತನಕುಮಾರ ಗೌರಣ್ಣವರ, ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು

