
ಹುಬ್ಬಳ್ಳಿ: ಕಳೆದ ಹನ್ನೊಂದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ನೇತೃತ್ವದ ತಂಡವು ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ.
ಬಂಧಿತ ಆರೋಪಿಯನ್ನು ತಾಲ್ಲೂಕಿನ ಬುಡರಸಿಂಗಿ ಗ್ರಾಮದ ಪ್ರಕಾಶ ಸಾತಪ್ಪ ಹಂಚಿನಮನಿ ಎಂದು ಗುರುತಿಸಲಾಗಿದೆ. ಈತ ತನ್ನ ಕುಟುಂಬದವರಿಗೂ ಸುಳಿವು ಸಿಗದಂತೆ ತಲೆಮರೆಸಿಕೊಂಡಿದ್ದ. ತನ್ನ ಹೆಸರಿನಲ್ಲಿ ಯಾವುದೇ ಸಿಮ್ ಕಾರ್ಡ್ ಬಳಸದೆ, ಬೇರೆಯವರ ಮೊಬೈಲ್ ಸಂಖ್ಯೆಗಳನ್ನು ಪಡೆದು ಪೊಲೀಸರ ಕಣ್ತಪ್ಪಿಸಿಕೊಂಡಿದ್ದ.
ಪ್ರಕರಣಗಳ ಹಿನ್ನೆಲೆ:
ಪ್ರಕಾಶ ಹಂಚಿನಮನಿ 2014ರಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಮೊದಲನೆಯದಾಗಿ, ಬುಡರಸಿಂಗಿ ಗ್ರಾಮದ ಪಕ್ಕದ ಮನೆಯ ಸೋಮರಾಜ ದೇವಲಾಪುರ ಎಂಬುವವರ ಮೇಲೆ ಕುಡಗೋಲಿನಿಂದ ಹಲ್ಲೆ ಮಾಡಿದ್ದ. ಎರಡನೇ ಪ್ರಕರಣದಲ್ಲಿ, ನೂಲ್ವಿ ಗ್ರಾಮದ ಭೀಮಾಬಾಯಿ ಘೋರ್ಷಡೆ ಅವರ ಮನೆಗೆ ನೀರು ಕೇಳುವ ನೆಪದಲ್ಲಿ ನುಗ್ಗಿ ಮಾಂಗಲ್ಯ ದೋಚಿದ್ದ. ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದ ನಂತರ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದರಿಂದ ನ್ಯಾಯಾಲಯವು ಈತನ ಮೇಲೆ ‘ಓಪನ್ ವಾರಂಟ್’ ಹೊರಡಿಸಿತ್ತು.
ಪತ್ತೆ ಹಚ್ಚಿದ ರೀತಿ:
ಪೊಲೀಸ್ ತಂಡವು ಆರೋಪಿಯ ಚಲನವಲನದ ಮೇಲೆ ಕಣ್ಣಿಟ್ಟು, ಕಳೆದ ಮೂರು ದಿನಗಳಿಂದ ಹೊಸಪೇಟೆ, ಮದ್ದೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ತನಿಖೆ ನಡೆಸಿತ್ತು. ಕೊನೆಗೆ, ಬೆಂಗಳೂರಿನ ಸಾತಗುಡಿ ಎಂಬಲ್ಲಿ ಸಿನಿಮೀಯ ಶೈಲಿಯಲ್ಲಿ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಈ ಕಾರ್ಯಾಚರಣೆಯಲ್ಲಿ ಸಿಪಿಐ ಚನ್ನಣ್ಣವರ ಅವರೊಂದಿಗೆ ಅಪರಾಧ ವಿಭಾಗದ ಸಿಬ್ಬಂದಿಗಳಾದ ಚನ್ನಪ್ಪ ಬಳ್ಳೋಳ್ಳಿ ಮತ್ತು ತಿಪ್ಪಣ್ಣ ಆಲೂರ ಅವರ ತಂಡ ಪ್ರಮುಖ ಪಾತ್ರ ವಹಿಸಿತ್ತು.
ಪೊಲೀಸರ ಈ ಸಾಧನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹುಮಾನವನ್ನೂ ಘೋಷಿಸಿದ್ದಾರೆ.

