

ನವಲಗುಂದ: ಪ್ರಪಂಚದಲ್ಲಿ ದೇವರು ಮತ್ತು ತಾಯಿಯ ನಂತರದ ಅತ್ಯಂತ ಅಮೂಲ್ಯ ಸ್ಥಾನ ಗುರುವಿಗೆ ಮಾತ್ರ ಇರಲು ಸಾಧ್ಯ ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅವರು ಅಭಿಪ್ರಾಯಪಟ್ಟರು. ಅವರು ಶನಿವಾರ ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 2006-07ನೇ ಸಾಲಿನ 7ನೇ ತರಗತಿಯ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹಳೇ ವಿದ್ಯಾರ್ಥಿಗಳು ತಮ್ಮ ವಿದ್ಯಾದಾನ ಮಾಡಿದ ಗುರುಗಳಿಗೆ ಪುಷ್ಪನಮನ ಸಲ್ಲಿಸಿ, ಪುಷ್ಪದಿಂದಲೇ ವೇದಿಕೆಯವರೆಗೆ ಭವ್ಯ ಸ್ವಾಗತ ನೀಡುವ ಮೂಲಕ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರು, ವಿದ್ಯಾರ್ಥಿಗಳು ತಮ್ಮ ಗುರುಗಳು ಕಲಿಸಿದ ವಿದ್ಯೆಯಿಂದ ಸಮಾಜದಲ್ಲಿ ಉನ್ನತ ಸ್ಥಾನವನ್ನು ತಲುಪಿದಾಗ ಮಾತ್ರ ವಿದ್ಯೆ ಕಲಿಸಿದ ಗುರುಗಳಲ್ಲಿ ಸಾರ್ಥಕಭಾವ ಮೂಡುತ್ತದೆ ಎಂದರು.
ಗುರುವಂದನಾ ಸ್ವೀಕರಿಸಿದ ಶಿಕ್ಷಕಿ ಯು. ಎಂ. ನದಾಫ ಅವರು ಮಾತನಾಡಿ, 19 ವರ್ಷಗಳ ನಂತರ ತಮ್ಮ ಹಳೆಯ ವಿದ್ಯಾರ್ಥಿಗಳು ಹೀಗೆ ಒಟ್ಟಿಗೆ ಸೇರಿ, ವಿದ್ಯಾರ್ಥಿ ಜೀವನದ ಚೇಷ್ಟೆಗಳು, ಕೀಟಲೆಗಳು ಹಾಗೂ ಆಟಗಳ ನೆನಪಿನ ಜೊತೆಗೆ ಪ್ರಸ್ತುತ ತಾವು ಪಡೆದಿರುವ ಸ್ಥಾನಮಾನ, ನಿರ್ವಹಿಸುತ್ತಿರುವ ಹುದ್ದೆಗಳು ಮತ್ತು ಸಕಾರಾತ್ಮಕ ಜೀವನದ ಬಗ್ಗೆ ವಿಭಿನ್ನ ಶೈಲಿಯಲ್ಲಿ ಹೇಳುತ್ತಿರುವುದನ್ನು ಕೇಳಿ ಸಂತಸವಾಯಿತು. ಒಂದೇ ಕಡೆ ವ್ಯಾಸಂಗ ಮಾಡಿದ ತಾವುಗಳೆಲ್ಲಾ ಇಂದು ಬೇರೆ ಬೇರೆ ಸಂಸ್ಥೆಗಳು, ವ್ಯವಹಾರಗಳು ಮತ್ತು ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಿರುವುದು ಹೆಮ್ಮೆಯ ಸಂಗತಿ. ತಮ್ಮ ಹಿಂದಿನ ದಿನಗಳ ನೆನಪುಗಳನ್ನು ಮೆಲುಕು ಹಾಕಿಕೊಳ್ಳಲು ಎಲ್ಲರೂ ಒಟ್ಟಿಗೆ ಸೇರುವ ಸದಾವಕಾಶವನ್ನು ಕಲ್ಪಿಸಿಕೊಂಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದರು.
ಗುರುವಂದನಾ ಸ್ವೀಕರಿಸಿದ ಇತರ ಶಿಕ್ಷಕರಾದ ಪಂಚಾಕ್ಷಯ್ಯ ಹಿರೇಮಠ, ಎಸ್. ಜಿ. ಲಕ್ಕುಂಡಿ, ಎಸ್. ಸಿ. ಬೇವುರ್, ಸಂಜೀವರಡ್ಡಿ ಈರಡ್ಡಿ ಹಾಗೂ ಬಸಪ್ಪ ತಟ್ಟಿಮನಿ ಅವರು ಮಾತನಾಡಿ, 19 ವರ್ಷಗಳ ನಂತರ ಒಟ್ಟಿಗೆ ಸೇರಿ ಗುರುಗಳಿಗೆ ವಂದನೆ ಸಲ್ಲಿಸಬೇಕು ಎಂಬ ವಿದ್ಯಾರ್ಥಿಗಳ ಈ ಆಲೋಚನೆ ನಿಜಕ್ಕೂ ಅನುಸರಣೀಯ ಎಂದರು.
ಕಾರ್ಯಕ್ರಮದಲ್ಲಿ ಎಚ್. ಎನ್. ಲಿಂಗರೆಡ್ಡಿ, ಬಸವರೆಡ್ಡಿ ಕುರಹಟ್ಟಿ, ಚನ್ನಬಸಪ್ಪ ಪಡೆಸೂರ, ಮಡಿವಾಳಯ್ಯ ಕಂಬಿ, ನಿಂಗಪ್ಪ ಬಾರಕೇರ, ರುದ್ರಗೌಡ ಸರನಾಡಗೌಡ್ರ, ಶರಣು ಯಮನೂರ, ವಿನೋದರಾವ ಬರ್ಗೆ, ರುದ್ರಗೌಡ ಸರನಾಡಗೌಡ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಮತ್ತು ಗಣ್ಯರು ಭಾಗವಹಿಸಿದ್ದರು.

