ಕುಂದಗೋಳ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಲ್‌ಇಯಿಂದ ಉಚಿತ ಫಿಸಿಯೋಥೆರಪಿ ಸೇವೆ

Spread the love

ಕುಂದಗೋಳ: ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಹುಬ್ಬಳ್ಳಿಯ ಗಬ್ಬೂರಿನ ಕೆಎಲ್‌ಇ ಫಿಸಿಯೋಥೆರಪಿ ಕಾಲೇಜು ವತಿಯಿಂದ ಬಡ ರೋಗಿಗಳ ಅನುಕೂಲಕ್ಕಾಗಿ ವಾರದಲ್ಲಿ ಮೂರು ದಿನ ಉಚಿತ ಫಿಸಿಯೋಥೆರಪಿ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ವಿಶ್ವ ಫಿಸಿಯೋಥೆರಪಿ ದಿನಾಚರಣೆ ಅಂಗವಾಗಿ ಈ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕ್ರಪ್ಪ ಎಸ್. ತುಕ್ಕಣ್ಣವರ, ಬಡ ರೋಗಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಸೇವೆ ನೀಡಲು ಮುಂದಾಗಿರುವ ಕೆಎಲ್‌ಇ ಸಂಸ್ಥೆಯ ಗಬ್ಬೂರ ಕಾಲೇಜಿನ ಆಡಳಿತ ಮಂಡಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಜನರು ಈ ಫಿಸಿಯೋಥೆರಪಿ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿಕೊಂಡರು.

ಗಬ್ಬೂರು ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಡಾ. ಸುಮಾ ಪಾಟೀಲ ಮಾತನಾಡಿ, “ಈ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12:30ರವರೆಗೆ ಸಾರ್ವಜನಿಕರಿಗೆ ಉಚಿತ ಸಲಹೆ ಹಾಗೂ ಚಿಕಿತ್ಸೆ ನೀಡಲಾಗುವುದು” ಎಂದು ತಿಳಿಸಿದರು.

ಈ ಶಿಬಿರದಲ್ಲಿ ಪ್ರಮುಖವಾಗಿ ಭುಜದ ನೋವು, ಬೆನ್ನು ನೋವು, ಸಂಧಿವಾತ, ಸ್ಟ್ರೋಕ್ ನಂತರದ ತೊಂದರೆಗಳು, ಸ್ಪಾಂಡಿಲೋಸಿಸ್, ಹಿರಿಯ ನಾಗರಿಕರ ಚಲನವಲನದ ತೊಂದರೆಗಳು, ಮಕ್ಕಳಲ್ಲಿ ಅಭಿವೃದ್ಧಿಯ ವಿಳಂಬ ಹಾಗೂ ಮಹಿಳೆಯರಲ್ಲಿ ಉಂಟಾಗುವ ಪ್ರಸವ ನಂತರದ ಸಮಸ್ಯೆಗಳಿಗೆ ಉಚಿತ ಸಲಹೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಮುಕ್ಕಣ್ಣವರ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ. ಸುಮಾ ಪಾಟೀಲ್ ಹಾಗೂ ತಜ್ಞ ವೈದ್ಯರಾದ ಡಾ. ನವಮಿ ಮಹಾವೀರ, ಡಾ. ಅದಿತಿ ಪ್ರಯಾಗ ಸೇರಿದಂತೆ ಕೆಎಲ್‌ಇ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *