
ಹನೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಏಳಿಗೆಗೆ ಶ್ರಮಿಸುವುದರ ಜೊತೆಗೆ, ಈಗ ಏತ ನೀರಾವರಿ ಯೋಜನೆಗಳ ಮೂಲಕ ರೈತರ ದಶಕಗಳ ಕಾಲದ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ಹಾಡಲು ಮುಂದಾಗಿದೆ ಎಂದು ಮಾಜಿ ಶಾಸಕ ಆರ್. ನರೇಂದ್ರ ಅವರು ತಿಳಿಸಿದರು.
ಹನೂರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ರಾಜ್ಯ ಬಜೆಟ್‌ನಲ್ಲಿ ಹನೂರು ಕ್ಷೇತ್ರದ ಬಹುದಿನಗಳ ಕನಸಾದ ಉಡುತೊರೆಹಳ್ಳ ಜಲಾಶಯ ಏತ ನೀರಾವರಿ ಯೋಜನೆಗೆ ಸುಮಾರು 490 ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿರುವುದು ಸಂತಸ ತಂದಿದೆ. ಕಾವೇರಿ ನದಿ ಮೂಲದಿಂದ ಈ ಭಾಗದ ಪ್ರಮುಖ ಜಲಾಶಯಗಳಿಗೆ ನೀರು ತುಂಬಿಸುವ ಈ ಬೃಹತ್ ಯೋಜನೆಗಾಗಿ ತಮ್ಮ ತಂದೆಯವರ ಕಾಲದಿಂದಲೂ ಹೋರಾಟ ನಡೆಸುತ್ತಾ ಬರಲಾಗಿತ್ತು. ಹಿಂದಿನ ಅವಧಿಯಲ್ಲಿ ತಾವೇ ಶ್ರಮವಹಿಸಿ ಈ ಯೋಜನೆಯ ಡಿಪಿಆರ್ ಸಿದ್ಧಪಡಿಸಿ ಸರ್ಕಾರದ ಅನುಮೋದನೆ ಪಡೆದಿದ್ದರೂ, ಕಳೆದ ಬಿಜೆಪಿ ಸರ್ಕಾರವು ಇದಕ್ಕೆ ಯಾವುದೇ ಹಣಕಾಸಿನ ನೆರವು ನೀಡದೆ ರೈತರನ್ನು ವಂಚಿಸಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರವು ಮೊದಲ ಬಜೆಟ್‌ನಲ್ಲೇ ಹಣ ಮೀಸಲಿಡುವ ಮೂಲಕ ಸುಮಾರು 15 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಭದ್ರಬುನಾದಿ ಹಾಕಿದೆ ಎಂದರು.
ಇದೇ ವೇಳೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ ಅವರು, ಕೆಶಿಪ್ ಯೋಜನೆಯ ಮೊದಲ ಹಂತದ ಅಡಿಯಲ್ಲಿ ಈಗಾಗಲೇ 108 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪೂರ್ಣಗೊಂಡಿದೆ. ಹನೂರು ತಾಲ್ಲೂಕು ಕೇಂದ್ರದಿಂದ ರಾಮಾಪುರ ಮಾರ್ಗವಾಗಿ ಪಾಲಾರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಕೆಶಿಪ್ ಯೋಜನೆಗೆ ಈ ಹಿಂದೆ ಅನುಮೋದನೆ ದೊರೆತಿದ್ದರೂ ಹಣ ಬಿಡುಗಡೆಯಾಗಿರಲಿಲ್ಲ. ಮುಂಬರುವ ದಿನಗಳಲ್ಲಿ ನಮ್ಮ ಸರ್ಕಾರವು ಈ ಯೋಜನೆ ಸೇರಿದಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಅನುದಾನಗಳನ್ನು ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರದಿ: ಬಂಗಾರಪ್ಪ ಸಿ.

