ಬೆಳೆ ಹಾನಿಗೆ ಸರ್ಕಾರದ ತಾರತಮ್ಯ ಕ್ರಮ ಖಂಡನೀಯ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

Spread the love

ನವಲಗುಂದ: ನಿರಂತರವಾಗಿ ಸುರಿದ ಮಳೆಯಿಂದ ರೈತರು ಬೆಳೆದ ಎಲ್ಲಾ ರೀತಿಯ ಬೆಳೆಗಳು ಹಾಳಾಗಿದ್ದರೂ, ಕೇವಲ ಹೆಸರು ಮತ್ತು ಉದ್ದಿಗೆ ಬೆಳೆಗಳಿಗೆ ಮಾತ್ರ ಪರಿಹಾರ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯವೆಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.

ಅವರು ಪ್ರಕಟಣೆ ಹೊರಡಿಸಿ ಹೇಳುವಾಗ, ಇತ್ತೀಚಿನ ಅತಿವೃಷ್ಟಿಯಿಂದ ನವಲಗುಂದ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಹತ್ತಿ, ಮೆಣಸಿನಕಾಯಿ, ಗೋವಿನಜೋಳ, ಈರುಳ್ಳಿ, ಸೋಯಾಬಿನ್, ಶೇಂಗಾ, ಪೇರಲ ಸೇರಿದಂತೆ ಎಲ್ಲಾ ಪ್ರಮುಖ ಬೆಳೆಗಳು ಸಂಪೂರ್ಣ ಹಾನಿಗೊಂಡಿವೆ ಎಂದು ತಿಳಿಸಿದರು. ಇದರ ಪರಿಣಾಮವಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದರು.

ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್‌ಗೆ ₹17 ಸಾವಿರ ಪರಿಹಾರ ನೀಡುವ ನಿರ್ಧಾರ ತೆಗೆದುಕೊಂಡಿದ್ದು, ಇದು ಅನ್ಯಾಯದ ಕ್ರಮವಾಗಿದ್ದು ರೈತರ ಹಿತವಿರೋಧಿಯಾಗಿದೆ ಎಂದು ಮುನೇನಕೊಪ್ಪ ತೀವ್ರವಾಗಿ ಟೀಕಿಸಿದರು. “ಹೆಕ್ಟೇರ್‌ಗೊಂದು ₹50 ಸಾವಿರ ಪರಿಹಾರ ನೀಡಬೇಕು. ಉಳಿದ ಎಲ್ಲಾ ಬೆಳೆಗಳಿಗೆ ಕೂಡ ತಕ್ಷಣ ಪರಿಹಾರ ಪ್ರಕಟಿಸಬೇಕು. ಇಲ್ಲದಿದ್ದರೆ ರೈತರ ಜೊತೆ ಹೋರಾಟ ತಪ್ಪದು,” ಎಂದು ಅವರು ಎಚ್ಚರಿಸಿದರು.

ಮುಂಗಾರು ಬೆಳೆಗಳ ಸಂಪೂರ್ಣ ನಾಶದಿಂದ ಹಿಂಗಾರಿನ ಬೆಳೆ ಬೆಳೆಸುವ ಶಕ್ತಿ ರೈತರಿಗೆ ಉಳಿದಿಲ್ಲ. ಇಂತಹ ಸಂದರ್ಭದಲ್ಲಿಯೂ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು.


ಅಣ್ಣಿಗೇರಿ, ಮೊರಬ, ಶಿರಗುಪ್ಪಿ ಹೋಬಳಿಗಳಲ್ಲಿ ತಾರತಮ್ಯ: ಖಂಡನೆ

ನವಲಗುಂದ ಕ್ಷೇತ್ರದ ಅಣ್ಣಿಗೇರಿ, ಮೊರಬ ಮತ್ತು ಶಿರಗುಪ್ಪಿ ಹೋಬಳಿಗಳಲ್ಲಿ ಸರ್ಕಾರ ವಿಭಿನ್ನ ತೀರ್ಮಾನ ತೆಗೆದುಕೊಂಡು ರೈತ ವಿರೋಧಿ ನೀತಿಯನ್ನು ಅನುಸರಿಸಿದೆ ಎಂದು ಮಾಜಿ ಸಚಿವರು ಆರೋಪಿಸಿದರು. “ಇಡೀ ಕ್ಷೇತ್ರದಲ್ಲಿ ಒಂದೇ ರೀತಿಯ ಹಾನಿ ಸಂಭವಿಸಿದಾಗ ಹೋಬಳಿ ಮಟ್ಟದಲ್ಲಿ ತಾರತಮ್ಯ ತೋರಿಸಿರುವ ಉದ್ದೇಶವನ್ನು ಸರ್ಕಾರ ಸ್ಪಷ್ಟಪಡಿಸಬೇಕು,” ಎಂದು ಅವರು ಬೇಡಿಕೆ ಇಟ್ಟಿದ್ದಾರೆ.

Leave a Reply

Your email address will not be published. Required fields are marked *