
ನವದೆಹಲಿ: ಮಗನ ಉಸಿರು ನಿಲ್ಲಲಿದೆ ಎಂದು ತಿಳಿದೂ, ಭಾರವಾದ ಹೃದಯದಿಂದ ಹೆತ್ತವರು ನೀಡಿದ ಆ ಅಂತಿಮ ವಿದಾಯದ ಮಾತುಗಳು ಕಲ್ಲನ್ನು ಕರಗಿಸುವಂತಿದ್ದವು. ಕಳೆದ 13 ವರ್ಷಗಳಿಂದ ಕೋಮಾದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗಾಜಿಯಾಬಾದ್ನ ಹರೀಶ್ ರಾಣಾ ಅವರ ಸುದೀರ್ಘ ಕದನಕ್ಕೆ ಈಗ ತೆರೆ ಬೀಳುತ್ತಿದೆ.
ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ಹರೀಶ್ ಅವರನ್ನು ದಾಖಲಿಸಲಾಗಿದ್ದು, ಅಲ್ಲಿ ಅವರ ಜೀವ ರಕ್ಷಕ ವ್ಯವಸ್ಥೆಯನ್ನು (Life Support) ತೆಗೆದುಹಾಕುವ ಮೂಲಕ ‘ಇಚ್ಛಾಮರಣ’ ನೀಡುವ ಪ್ರಕ್ರಿಯೆ ನಡೆಯಲಿದೆ. ಈ ದೇಶದ ಯಾವುದೇ ವೈದ್ಯಕೀಯ ಚಿಕಿತ್ಸೆಗೂ ಹರೀಶ್ ಅವರನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ ಎಂಬುದು ವಿಧಿಯ ಕ್ರೂರ ಆಟ.
ಹದಿನಾಲ್ಕು ವಸಂತಗಳ ಮೌನ ಸೇವೆ:
ಒಂದಲ್ಲ ಎರಡಲ್ಲ, ಬರೋಬ್ಬರಿ 13 ವರ್ಷಗಳು! ತನ್ನ ಮಗ ಮತ್ತೆ ಎದ್ದು ನಿಲ್ಲಲಾರ, ತನ್ನನ್ನು “ಅಮ್ಮ” ಎಂದು ಕರೆಯಲಾರ ಎಂದು ತಿಳಿದಿದ್ದರೂ, ಆ ತಾಯಿ ತನ್ನ ಮಗನ ಸೇವೆಯಲ್ಲಿ ಕಿಂಚಿತ್ತೂ ಹಿಂದೆ ಬೀಳಲಿಲ್ಲ. ಮಗನ ಪ್ರತಿಯೊಂದು ಉಸಿರಾಟವನ್ನೂ ಕಾಯುತ್ತಾ, ಬೆಡ್ ಮೇಲಿದ್ದ ಅವನನ್ನೇ ಲೋಕವೆಂದು ನಂಬಿದ್ದ ಆ ಹೆತ್ತವರಿಗೆ ಈ ವಿದಾಯದ ಕ್ಷಣಗಳು ಅಕ್ಷರಶಃ ನರಕಸದೃಶವಾಗಿದ್ದವು.
”ಎಲ್ಲರನ್ನೂ ಕ್ಷಮಿಸಿಬಿಡು ಮಗನೇ, ನಿನಗೆ ನೋವಾಗಿದ್ದರೆ ಎಲ್ಲರಲ್ಲೂ ಕ್ಷಮೆ ಕೇಳಿಬಿಡು, ಇನ್ನು ನೀನು ನಿಶ್ಚಿಂತೆಯಿಂದ ಹೊರಡು…” ಎಂದು ಆ ತಂದೆ-ತಾಯಿ ಹೇಳುವಾಗ ಅಲ್ಲಿದ್ದ ಪ್ರತಿಯೊಬ್ಬರ ಕಣ್ಣಾಲಿಗಳು ತೇವವಾಗಿದ್ದವು. 13 ವರ್ಷಗಳ ಕಾಲ ಎವೆಯಿಕ್ಕದೆ ಮಗನನ್ನು ಸಲಹಿದ ಆ ಕೈಗಳು ಇಂದು ಅವನನ್ನು ಮರಣದೇವತೆಗೆ ಒಪ್ಪಿಸುತ್ತಿವೆ.
ಭಾರತದಲ್ಲಿ ಇಚ್ಛಾಮರಣದ ಇಂತಹ ಪ್ರಕರಣಗಳು ವಿರಳವಾಗಿದ್ದು, ಹರೀಶ್ ರಾಣಾ ಅವರ ಈ ಕಥೆ ವೈದ್ಯಕೀಯ ಲೋಕದ ಅಸಹಾಯಕತೆ ಮತ್ತು ಹೆತ್ತವರ ಅಪಾರ ಪ್ರೀತಿಯ ಸಂಕೇತವಾಗಿ ಉಳಿಯಲಿದೆ.

