
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್’ (VB-GRAM G) ಯೋಜನೆ ವಿರುದ್ಧ ಹೋರಾಟಕ್ಕೆ ಕರೆ ನೀಡಿರುವ ಕಾಂಗ್ರೆಸ್ ಪಕ್ಷದ ನೈತಿಕತೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರು ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ಆಧಾರದ ಮೇಲೆ ಈ ಹೋರಾಟ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಸವಾಲು ಹಾಕಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಯೋಜನೆಯ ಬಗ್ಗೆ ಹಸಿ ಸುಳ್ಳುಗಳನ್ನು ಹರಡುತ್ತಿದೆ ಎಂದು ಕಿಡಿಕಾರಿದರು.
ಕಾರ್ಮಿಕರ ಹಕ್ಕು ಕಸಿದಿಲ್ಲ, ಕೆಲಸದ ಅವಧಿ 125 ದಿನಕ್ಕೆ ಏರಿಕೆ
“ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಈ ಯೋಜನೆ ಕಸಿಯಲಿದೆ ಎಂಬುದು ಶುದ್ಧ ಸುಳ್ಳು. ನಾವು ಉದ್ಯೋಗದ ದಿನಗಳನ್ನು 100ರಿಂದ 125 ದಿನಕ್ಕೆ ಏರಿಸಿದ್ದೇವೆ. ಇದು ಸಂಸತ್ತಿನ ಕಾಯ್ದೆಯಾಗಿದ್ದು, ಯಾವುದೇ ಕಾರಣಕ್ಕೂ ಕೆಲಸದ ಹಕ್ಕನ್ನು ಮೊಟಕುಗೊಳಿಸುವುದಿಲ್ಲ. ಸರಿಯಾಗಿ ಕೆಲಸ ನೀಡಿ ಮೂಲಭೂತ ಸೌಕರ್ಯ ವೃದ್ಧಿಸುವ ರಾಜ್ಯಗಳಿಗೆ ಎಸ್‌ಬಿಐ ಅಂದಾಜಿನಂತೆ ತಲಾ 17 ಸಾವಿರ ಕೋಟಿ ರೂ. ಅನುದಾನ ಸಿಗಲಿದೆ. ಕಾಂಗ್ರೆಸ್ ಕಾಲದಲ್ಲಿ ಮನ್‍ರೇಗಾ ಅಡಿಯಲ್ಲಿ ಸರಾಸರಿ 50 ದಿನ ಮಾತ್ರ ಕೆಲಸ ನೀಡಲಾಗುತ್ತಿತ್ತು ಮತ್ತು ಜೆಸಿಬಿ ಬಳಸಿ ಅಕ್ರಮ ಎಸಗಲಾಗುತ್ತಿತ್ತು” ಎಂದು ಜೋಶಿ ವಿವರಿಸಿದರು.
ಭ್ರಷ್ಟಾಚಾರದ ‘ಅಡ್ಡೆ’ಗೆ ತೆರೆ: ಡಿಜಿಟಲ್ ಪಾವತಿ ಕಡ್ಡಾಯ
ಹಿಂದಿನ ವ್ಯವಸ್ಥೆಯಲ್ಲಿ ಮೇಲ್ವಿಚಾರಣೆ ಇರದೆ ಕೇಂದ್ರದ ಹಣ ದುರ್ಬಳಕೆಯಾಗುತ್ತಿತ್ತು ಎಂದು ಆಕ್ಷೇಪಿಸಿದ ಅವರು, “ಈಗ ನಾವು ಕೇಂದ್ರೀಕೃತ ಪಾವತಿ ವ್ಯವಸ್ಥೆ ತಂದಿದ್ದೇವೆ. ಆಧಾರ್ ಸೇರ್ಪಡೆಯನ್ನು 12.11 ಕೋಟಿಗೆ ಹೆಚ್ಚಿಸಲಾಗಿದ್ದು, ಡಿಜಿಟಲ್ ಪಾವತಿ ಪ್ರಮಾಣವನ್ನು ಶೇ.37 ರಿಂದ ಶೇ.99ಕ್ಕೆ ಏರಿಸಿದ್ದೇವೆ. ಇನ್ನು ಮುಂದೆ ಮಧ್ಯವರ್ತಿಗಳಿಗೆ ಮತ್ತು ಗರಿಗರಿ ಅಂಗಿ ಹಾಕಿ ಓಡಾಡುವ ಕಾಂಗ್ರೆಸ್‌ನವರಿಗೆ ಹಣ ಹೊಡೆಯಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಈ ಯೋಜನೆಯನ್ನು ವಿರೋಧಿಸುತ್ತಿದೆ” ಎಂದು ಟೀಕಿಸಿದರು.
ಪಾರದರ್ಶಕತೆ ಮತ್ತು ಉತ್ತರದಾಯಿತ್ವ
ಯೋಜನೆಯಲ್ಲಿ ಪಾರದರ್ಶಕತೆ ತರಲು ಪ್ರತಿ 6 ತಿಂಗಳಿಗೊಮ್ಮೆ ಸೋಶಿಯಲ್ ಆಡಿಟಿಂಗ್ (ಸಾಮಾಜಿಕ ಪರಿಶೋಧನೆ) ನಡೆಸಲಾಗುವುದು ಮತ್ತು ಅದರ ವರದಿಯನ್ನು ಡಿಜಿಟಲ್ ಸಾಕ್ಷ್ಯವಾಗಿ ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು. “ವಾರಕ್ಕೊಮ್ಮೆ ಪ್ರಗತಿ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಅಹವಾಲುಗಳಿಗೆ ಬಹುಹಂತದ ಪರಿಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಪಶ್ಚಿಮ ಬಂಗಾಲ ಸೇರಿದಂತೆ ಹಲವು ರಾಜ್ಯಗಳಲ್ಲಿ ಯೋಜನೆ ಇಲ್ಲದಿದ್ದರೂ ಹಣ ಲೂಟಿ ಮಾಡಿದ ಇತಿಹಾಸವಿದೆ. ಅಂತಹ ಹಗರಣಗಳಿಗೆ ಇನ್ನು ಮುಂದೆ ಅವಕಾಶವಿಲ್ಲ” ಎಂದರು.
ರಾಹುಲ್ ಗಾಂಧಿ ಗಂಭೀರತೆ ಬಗ್ಗೆ ಪ್ರಶ್ನೆ
“ಯೋಜನೆಯ ಬಗ್ಗೆ ಚರ್ಚೆ ನಡೆದಾಗ ರಾಹುಲ್ ಗಾಂಧಿ ಅವರು ದೇಶದಲ್ಲೇ ಇರಲಿಲ್ಲ, ವಿದೇಶಕ್ಕೆ ಹೋಗಿದ್ದರು. ಅವರೊಬ್ಬ ಗಂಭೀರ ರಾಜಕಾರಣಿಯೇ?” ಎಂದು ಜೋಶಿ ಪ್ರಶ್ನಿಸಿದರು. ಅಲ್ಲದೆ, “ಹಳೆ ಕಲ್ಲು ಹೊಸ ಬಿಲ್” ಸಂಸ್ಕೃತಿಯ ಮೂಲಕ ದಲಿತ ಮಹಿಳೆಯರ ಹೆಸರಿನಲ್ಲೂ ಹಣ ಹೊಡೆದ ಉದಾಹರಣೆಗಳು ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ನಡೆದಿವೆ. ರಾಹುಲ್ ಗಾಂಧಿಗೆ ಬುದ್ಧಿಯಿಲ್ಲ, ನಿಮಗಾದರೂ ಬುದ್ಧಿ ಬೇಡವೇ ಸಿದ್ದರಾಮಯ್ಯನವರೇ?” ಎಂದು ನೇರವಾಗಿ ಕುಟುಕಿದರು.
ಆರ್ಥಿಕ ಪ್ರಗತಿಯ ಪಥದಲ್ಲಿ ಭಾರತ
ಐಎಂಎಫ್ ಮತ್ತು ವಿಶ್ವಬ್ಯಾಂಕ್ ವರದಿಗಳ ಪ್ರಕಾರ ಭಾರತದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಭಾರತ ಇಂದು ವಿಶ್ವದ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿದ್ದು, ಅತಿ ಶೀಘ್ರದಲ್ಲೇ 3ನೇ ಸ್ಥಾನಕ್ಕೇರಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ 85 ಲಕ್ಷ ಕೋಟಿ ರೂ. ಹೂಡಿಕೆಯ ಯೋಜನೆಗಳು ಈ ವ್ಯವಸ್ಥೆಯಿಂದ ವೇಗ ಪಡೆಯಲಿವೆ ಎಂದು ಅವರು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಶಾಸಕ ಮಹೇಶ್ ಟೆಂಗಿನಕಾಯಿ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹಾಗೂ ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಉಪಸ್ಥಿತರಿದ್ದರು.

