
ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿರುವ ಕೆ.ಎಲ್.ಇ. ಸಂಸ್ಥೆಯಲ್ಲಿ ನಡೆದ ಪ್ರಥಮ ವರ್ಷದ ಬಿ.ಕಾಂ. ವಿದ್ಯಾರ್ಥಿಗಳ ಸ್ವಾಗತ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕೂಲಿನಾಲಿ ಮಾಡಿ ಬದುಕು ಸಾಗಿಸಬಾರದು, ಬದಲಾಗಿ ಚೆನ್ನಾಗಿ ಓದಿ ಏನಾದರೂ ಸಾಧಿಸಬೇಕೆಂಬುದು ನಿಮ್ಮ ಹೆತ್ತವರ ಆಶಯವಾಗಿದೆ. ಅದನ್ನು ವಿದ್ಯಾರ್ಥಿಗಳು ಈಡೇರಿಸಬೇಕು” ಎಂದರು.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕೆ.ಎಲ್.ಇ. ಸಂಸ್ಥೆಯ ಕಾರ್ಯವನ್ನು ಅವರು ಶ್ಲಾಘಿಸಿದರು ಮತ್ತು ಅದರ ಸಂಸ್ಥಾಪಕ ಶಿರಸಂಗಿ ಲಿಂಗರಾಜ್ ಅವರನ್ನು ಸ್ಮರಿಸಿದರು.
ಜೆ.ಎಸ್.ಎಸ್. ವಿದ್ಯಾಪೀಠದ ಕಾರ್ಯದರ್ಶಿ ಯಲ್ಲಪ್ಪ ಮೇಗುಂಡಿ ಮಾತನಾಡಿ, “ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿ ಸಿಗುತ್ತದೆ ಎಂದು ಭಾವಿಸಬೇಡಿ. ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ನೌಕರಿ ಇಲ್ಲದಿದ್ದರೂ ವಿಯೆಟ್ನಾಂ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಯೋಗ ಗುರುಗಳಾಗಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಅದೇ ರೀತಿ, ಇಲ್ಲಿನ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಎಲ್.ಇ. ಸ್ಥಾನಿಕ ಅಧ್ಯಕ್ಷ ಎ.ಬಿ. ಉಪ್ಪಿನ ಮಾತನಾಡಿ, “ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು. ಜನ್ಮ ನೀಡಿದ ತಂದೆ-ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳ ಋಣವನ್ನು ತೀರಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಎಚ್.ಎನ್. ಪಾಟೀಲ, ಡಾ. ಬಿ.ಜಿ. ಪಾಟೀಲ, ಬಿ.ಬಿ. ಬೂದಿಹಾಳ, ಬಿ.ಎಂ. ಕಜ್ಜಿ, ಬಿ.ವೈ. ಸೈಬಣ್ಣವರ, ಪತ್ರಕರ್ತ ಅಶೋಕ ಘೋರ್ಪಡೆ, ರಜಾಕ್‌ಸಾಬ್ ಅಂಕಲಿಗಿ, ಎಂ.ಆರ್. ಯಲ್ಲರೆಡ್ಡಿ, ಶಿವಾನಂದ ಹತ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ ಯ. ಅತ್ತಿಗೇರಿ ಸ್ವಾಗತಿಸಿದರೆ, ಕುಮಾರಿ ಯಶೋದಾ ಆಲೂರ ಮತ್ತು ನಿಸರ್ಗ ಕೊರಡುರ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಪಕ್ಕೀರೇಶ ರವಡುರ ವಂದಿಸಿದರು.

