
ಮಂಗಳೂರು (ಅ. 27): ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತಲು ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ. ಅವರು ಸೋಮವಾರದಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಹಿಳೆಯರಿಗೆ ಅಗೌರವವಾಗಿ ಭಾಷಣ ಮಾಡಿದ್ದಾರೆ ಎಂದು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಈ ರೀತಿ ದ್ವೇಷಪೂರಿತ ಭಾಷಣ ಮಾಡುವವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದರು.
ಧರ್ಮಸ್ಥಳ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ, ಎಸ್.ಐ.ಟಿ (SIT) ತನಿಖೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಗೃಹಸಚಿವರು ಹೇಳಿದ್ದಾರೆ. ಈ ತಿಂಗಳಾಂತ್ಯದಲ್ಲಿ ತನಿಖಾ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಎಸ್.ಐ.ಟಿ ಹೇಳಿದೆಯೆಂದು ಮುಖ್ಯಮಂತ್ರಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಪತ್ರಕರ್ತರ ಅನುಕೂಲಕ್ಕಾಗಿ ವಾರ್ತಾ ಇಲಾಖೆ ವತಿಯಿಂದ ವಾಹನ ಒದಗಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ಗೆ ಸೇರಿದ್ದಾಗಿದೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವ ವಿಚಾರದಲ್ಲಿಯೂ ಹೈಕಮಾಂಡ್ ತೀರ್ಮಾನವೇ ಅಂತಿಮವಾದುದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

