
ಹುಬ್ಬಳ್ಳಿ: ಪ್ರೀತಿ ಹಾಗೂ ಅಂತರ್ಜಾತಿ ವಿವಾಹದ ಹೆಸರಿನಲ್ಲಿ ಮರ್ಯಾದಾ ಹತ್ಯೆಗಳು ನಡೆಯುತ್ತಿರುವುದು ನಾಗರಿಕ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದ್ದು, ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ತಂದೆಯೇ ತನ್ನ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆಗೈದ ಘಟನೆ ರವಿವಾರ ನಡೆದಿದೆ. ತಾನು ಸಾಕಿದ ಮಗಳೇ ತನಗೆ ಶತ್ರುವಾದಂತೆ ವರ್ತಿಸಿದ ತಂದೆ ಮತ್ತು ಆತನ ಸಂಬಂಧಿಕರು, ಕೇವಲ ಜಾತೀಯ ಅಹಂನಿಂದಾಗಿ ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯ ಪಾಟೀಲ (19) ಎಂಬ ಜೀವವನ್ನೇ ಬಲಿಪಡೆದಿದ್ದಾರೆ. ಈ ಅಮಾನುಷ ಕೃತ್ಯವು ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೃತ ಮಾನ್ಯ ಪಾಟೀಲ ಅದೇ ಗ್ರಾಮದ ದಲಿತ ಸಮುದಾಯದ ಯುವಕ ವಿವೇಕಾನಂದ ದೊಡ್ಡಮನಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ಮದುವೆಗೆ ಮೇಲ್ವರ್ಗಕ್ಕೆ ಸೇರಿದ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಪೊಲೀಸರ ಸಮ್ಮುಖದಲ್ಲಿ ನಡೆದ ರಾಜಿ ಪಂಚಾಯತಿಯ ಬಳಿಕ ಏಳು ತಿಂಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ಪ್ರಾಣಭಯದಿಂದ ಹಾವೇರಿ ಜಿಲ್ಲೆಯಲ್ಲಿ ನೆಲೆಸಿದ್ದ ದಂಪತಿಗಳು, ಕಳೆದ ಡಿ. 8ರಂದು ಊರಿಗೆ ಮರಳಿದ್ದರು. ಆದರೆ, ವೈರತ್ವದ ಕಿಚ್ಚು ಹಚ್ಚಿಕೊಂಡಿದ್ದ ಯುವತಿಯ ತಂದೆ ವೀರನಗೌಡ ಪಾಟೀಲ ಹಾಗೂ ಆತನ ಸಂಬಂಧಿಕರು, ರವಿವಾರ ಸಂಜೆ ದಂಪತಿಗಳು ಮನೆಯಲ್ಲಿದ್ದಾಗ ಕೊಡಲಿ ಮತ್ತು ತಲ್ವಾರ್‌ಗಳಂತಹ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಮಾನ್ಯಳನ್ನು ರಕ್ಷಿಸಲು ಬಂದ ವಿವೇಕಾನಂದ ಹಾಗೂ ಆತನ ಪೋಷಕರ ಮೇಲೂ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗರ್ಭಿಣಿ ಮಾನ್ಯ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಯುವತಿಯ ತಂದೆ ವೀರನಗೌಡ ಪಾಟೀಲ ಸೇರಿದಂತೆ ಮೂವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. “ಜಾತೀಯ ಸಂಕೋಲೆಗಳಿಂದ ಮಗಳ ಪ್ರಾಣವನ್ನೇ ತೆಗೆದ ಈ ಘಟನೆ ಅತ್ಯಂತ ಖಂಡನೀಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರ್ಯಾದಾ ಹತ್ಯೆಯ ಹೆಸರಿನಲ್ಲಿ ನಡೆದ ಈ ರಕ್ತದೋಕುಳಿ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

