ಕುಟುಂಬ ರಾಜಕಾರಣ: ಭಾರತದಲ್ಲಿ ಕರ್ನಾಟಕ 04 ನೇ ಸ್ಥಾನ?

Spread the love

ನವದೆಹಲಿ: ಭಾರತೀಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಎಷ್ಟು ಆಳವಾಗಿ ಬೇರೂರಿದೆ ಎಂಬುವುದಕ್ಕೆ ನೂತನ ವರದಿಯೊಂದು ಸ್ಪಷ್ಟ ಚಿತ್ರಣ ನೀಡಿದೆ. ದೇಶದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಈ ಹಣೆಬರಹದಿಂದ ಹೊರತಾಗಿಲ್ಲ ಎಂಬುದನ್ನು “ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್” (ADR) ಸಂಸ್ಥೆ ಪ್ರಕಟಿಸಿದ ವರದಿ ಬಹಿರಂಗಪಡಿಸಿದೆ.

ಪ್ರತಿ ಐವರಲ್ಲಿ ಒಬ್ಬರು ಕುಟುಂಬ ರಾಜಕಾರಣದಿಂದ ಬಂದವರು
ADR ವರದಿಯ ಪ್ರಕಾರ, ಭಾರತದಲ್ಲಿ ಶೇ. 21ರಷ್ಟು ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದವರು. ಅಂದರೆ, ದೇಶದ ಪ್ರತಿ ಐದು ಜನಪ್ರತಿನಿಧಿಗಳಲ್ಲಿ ಒಬ್ಬರು ತಮ್ಮ ಕುಟುಂಬದ ರಾಜಕೀಯ ಪ್ರಭಾವದಿಂದ ಅಧಿಕಾರಕ್ಕೇರಿದ್ದಾರೆ ಎಂದು ವರದಿ ಹೇಳುತ್ತದೆ. ಇದು ಭಾರತೀಯ ಪ್ರಜಾಪ್ರಭುತ್ವದ ಮೇಲೆ ಕುಟುಂಬ ರಾಜಕಾರಣ ಬೀರಿರುವ ಪರಿಣಾಮದ ಗಂಭೀರತೆಯನ್ನು ತೋರಿಸುತ್ತದೆ.

ಕರ್ನಾಟಕ ನಾಲ್ಕನೇ ಸ್ಥಾನದಲ್ಲಿ, ದಕ್ಷಿಣ ಭಾರತದಲ್ಲಿ ಪ್ರಬಲ ಪ್ರಭಾವ
ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶಗಳು ಕುಟುಂಬ ರಾಜಕಾರಣದಲ್ಲಿ ಪ್ರಬಲವಾಗಿವೆ. ಈ ಪಟ್ಟಿಯಲ್ಲಿ ನಮ್ಮ ಕರ್ನಾಟಕ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 94 ಜನಪ್ರತಿನಿಧಿಗಳು ಕುಟುಂಬ ರಾಜಕಾರಣದಿಂದ ಅಧಿಕಾರಕ್ಕೆ ಬಂದಿದ್ದಾರೆ.

ಇತರ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶದಲ್ಲಿ 141, ಮಹಾರಾಷ್ಟ್ರದಲ್ಲಿ 129, ಮತ್ತು ಬಿಹಾರದಲ್ಲಿ 96 ಜನಪ್ರತಿನಿಧಿಗಳು ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಅಸ್ಸಾಂ ರಾಜ್ಯವು ಕೇವಲ 9 ಮಂದಿಯೊಂದಿಗೆ ಕೊನೆಯ ಸ್ಥಾನದಲ್ಲಿದ್ದು, ಅಲ್ಲಿ ಕುಟುಂಬ ರಾಜಕಾರಣದ ಪ್ರಭಾವ ಕಡಿಮೆ ಇರುವುದನ್ನು ಸೂಚಿಸುತ್ತದೆ.

ಪಕ್ಷಾತೀತ ವಿದ್ಯಮಾನ: ವಿಶ್ಲೇಷಣೆ
ಕುಟುಂಬ ರಾಜಕಾರಣವು ಕೇವಲ ಒಂದು ನಿರ್ದಿಷ್ಟ ಪಕ್ಷಕ್ಕೆ ಸೀಮಿತವಾಗಿಲ್ಲ. ಬಹುತೇಕ ಎಲ್ಲ ಪ್ರಮುಖ ಪಕ್ಷಗಳಲ್ಲೂ ಈ ವಿದ್ಯಮಾನ ಕಾಣಸಿಗುತ್ತದೆ. ಇದು ಸಾರ್ವಜನಿಕ ನಾಯಕತ್ವದ ಬೆಳವಣಿಗೆಯ ಮೇಲೆ ಮತ್ತು ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದೇ ರೀತಿ ಮುಂದುವರಿದಲ್ಲಿ, ಯೋಗ್ಯತೆಗಿಂತ ಹೆಚ್ಚಾಗಿ ಕುಟುಂಬದ ಹೆಸರೇ ರಾಜಕೀಯದಲ್ಲಿ ಪ್ರಮುಖವಾಗಲಿದೆ ಎಂಬ ಆತಂಕವನ್ನು ಈ ವರದಿ ಹುಟ್ಟುಹಾಕಿದೆ.

Leave a Reply

Your email address will not be published. Required fields are marked *