ತಿಮ್ಮಕ್ಕ ಹೆಸರಿನಲ್ಲಿ ಪರಿಸರ ಪ್ರಶಸ್ತಿ, ₹1 ಕೋಟಿ ದತ್ತಿ ನಿಧಿ: ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವದಲ್ಲಿ ಮುಖ್ಯಮಂತ್ರಿ ಘೋಷಣೆ

Spread the love

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸ್ಥಾಪನೆಯಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ನಡೆದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಂಡಳಿಯಲ್ಲಿ ಒಂದು ಕೋಟಿ ರೂಪಾಯಿಗಳ ದತ್ತಿ ನಿಧಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಈ ನಿಧಿಯ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಪರಿಸರ ಸಂರಕ್ಷಣೆಗಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಮತ್ತು ಕನಿಷ್ಠ ಐದು ಪರಿಸರವಾದಿಗಳಿಗೆ ‘ಸಾಲು ಮರದ ತಿಮ್ಮಕ್ಕ’ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

​ಇದೇ ದಿನ ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನವಾಗಿದ್ದು, 1974ರಲ್ಲಿ ಇದೇ ದಿನದಂದು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಯಿತು. ಶ್ರೀಮತಿ ಇಂದಿರಾ ಗಾಂಧಿಯವರು ಪರಿಸರ ಮತ್ತು ಅರಣ್ಯ ರಕ್ಷಣೆಗೆ ಹಲವು ಪ್ರಮುಖ ಕಾಯ್ದೆಗಳನ್ನು ಜಾರಿಗೆ ತಂದಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು. ಪರಿಸರ ಸಂರಕ್ಷಣೆಯ ಜವಾಬ್ದಾರಿ ಕೇವಲ ಸರ್ಕಾರದ ಮೇಲಿಲ್ಲ. ಭೂಮಿಯ ಮೇಲಿನ ಜೀವಸಂಕುಲಕ್ಕೆ ಬದುಕಲು ಉತ್ತಮ ಪರಿಸರ ಅವಶ್ಯಕವಾಗಿದ್ದು, ಮಾಲಿನ್ಯ ರಹಿತ ಪರಿಸರ ನಿರ್ಮಿಸಲು ಸಾರ್ವಜನಿಕರು ಸಕ್ರಿಯರಾಗಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

​ಕೇಂದ್ರದ ವರದಿಯ ಪ್ರಕಾರ ದೇಶದ 131 ನಗರಗಳು ಮಾಲಿನ್ಯದಿಂದ ಕೂಡಿರುವುದು ಆತಂಕಕಾರಿ ವಿಷಯ. ಈ ಪಟ್ಟಿಯಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಮತ್ತು ಕಲಬುರ್ಗಿ ನಗರಗಳು ಸೇರಿವೆ. ನಮ್ಮ ರಾಜ್ಯವನ್ನು ವಾಸಯೋಗ್ಯವಾಗಿಸಲು, ಜನರೆಲ್ಲರೂ ಪರಿಸರದ ಬಗ್ಗೆ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಬೆಂಗಳೂರಿನಲ್ಲಿ ವಾಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಸಾಧ್ಯತೆಯಿದ್ದು, ಅದಕ್ಕಾಗಿ ಎಲ್ಲರೂ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಸಾಲು ಮರದ ತಿಮ್ಮಕ್ಕ ಇದಕ್ಕೆ ಶ್ರೇಷ್ಠ ಉದಾಹರಣೆ. ಇತ್ತೀಚೆಗೆ ನಿಧನರಾದ ಅವರು ಮರಗಿಡಗಳನ್ನು ತಮ್ಮ ಮಕ್ಕಳಂತೆ ಬೆಳೆಸುವ ಪ್ರವೃತ್ತಿಯನ್ನು ಹೊಂದಿದ್ದರು. ಪ್ರತಿಯೊಬ್ಬರೂ ತಿಮ್ಮಕ್ಕನವರಂತೆ ಆಗಬೇಕು ಎನ್ನುವ ಆಶಯ ನಮ್ಮದು ಎಂದು ಸಿಎಂ ಹೇಳಿದರು.

​ಬೆಂಗಳೂರು ನಗರವೊಂದರಲ್ಲೇ ಪ್ರತಿದಿನ 900 ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. ಜನರು ಇದನ್ನು ಅರ್ಥಮಾಡಿಕೊಳ್ಳದೇ ಹೋದರೆ ಪ್ಲಾಸ್ಟಿಕ್ ಮುಕ್ತ ನಗರವಾಗಲು ಸಾಧ್ಯವಿಲ್ಲ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿ, ಸರ್ಕಾರದ ಜೊತೆ ಕೈಜೋಡಿಸಿದಾಗ ಮಾತ್ರ 2030ರ ಹೊತ್ತಿಗೆ ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಸಾಧ್ಯ. ಬೆಂಗಳೂರನ್ನು ‘ಗಾರ್ಬೇಜ್ ನಗರ’ವಾಗಿಸುವುದು ನಮ್ಮ ಉದ್ದೇಶವಲ್ಲ, ಬದಲಾಗಿ ಪ್ಲಾಸ್ಟಿಕ್ ಮತ್ತು ಕಸ ಮುಕ್ತ ನಗರವಾಗಿಸಬೇಕು ಎನ್ನುವುದು ಸರ್ಕಾರದ ಉದ್ದೇಶ. ಜನರೂ ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

​ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಕೈಗಾರಿಕೆಗಳು ಅಗತ್ಯ. ಆದರೆ, ಪರಿಸರ ಮಾಲಿನ್ಯ ಉಂಟಾಗದಂತೆ ತ್ಯಾಜ್ಯವನ್ನು ನಿರ್ವಹಿಸುವುದು ಕೈಗಾರಿಕೋದ್ಯಮಿಗಳ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಇತರರಿಗೆ ಮಾದರಿಯಾಗಬೇಕು. ತಿಮ್ಮಕ್ಕ ಪರಿಸರವಾದಿಯಾಗಿದ್ದರಿಂದ ನಾವು ಅವರನ್ನು ನೆನೆಯುತ್ತಿದ್ದೇವೆ. ವಿದ್ಯಾರ್ಥಿಗಳು ಪ್ರತಿ ವರ್ಷ ಇಂತಹ ಸಮಾರಂಭಗಳನ್ನು ಆಯೋಜಿಸಿ ಜಾಗೃತಿ ಉಂಟುಮಾಡಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

Leave a Reply

Your email address will not be published. Required fields are marked *