
ನವಲಗುಂದ: ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಹಾಗೂ ಪಾರ್ಶ್ವವಾಯು (Stroke) ರೋಗಗಳ ಪರೀಕ್ಷೆಯನ್ನು ಸಕಾಲದಲ್ಲಿ ಮಾಡಿಸಿಕೊಂಡು, ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಲು ಸಾರ್ವಜನಿಕರು ಮುಂದಾಗಬೇಕು ಎಂದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೂಪಾ ಕಿಣಗಿ ಸಲಹೆ ನೀಡಿದರು.
ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿತ ಹಾಗೂ ಪಾರ್ಶ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯ ಬದಲಾವಣೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಆದ್ದರಿಂದ, ನಿಯಮಿತ ಆಹಾರ ಸೇವನೆ, ಪ್ರತಿದಿನ ವಾಕಿಂಗ್ ಮಾಡುವ ಮೂಲಕ ತಮ್ಮ ದೈನಂದಿನ ದಿನಚರಿಯನ್ನು ಬದಲಾಯಿಸಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಮೂಲಕ ಹೃದಯ ಸಂಬಂಧಿ ಕಾಯಿಲೆಗಳ ತಡೆಗಟ್ಟಲು ಮುಂಜಾಗ್ರತೆ ವಹಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಂ. ಮಂಗಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಳಗವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಶರಣಪ್ಪ ಕಡ್ಲಿಬಿಷ್ಠಿ ಅವರು ಸಾರ್ವಜನಿಕರಿಗೆ ಹೃದಯದ ಪ್ರಥಮ ಚಿಕಿತ್ಸೆ ಹಾಗೂ ಹೃದಯದ ಕಾಯಿಲೆಗಳ ಕುರಿತು ಮಾಹಿತಿ ನೀಡಿದರು.
ಲಿಂಗರಾಜ ಬಂಡಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

