
ಬೆಂಗಳೂರು: ರಾಜ್ಯದ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಇಂದು (ಮಂಗಳವಾರ) ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ೧೨ಕ್ಕೂ ಹೆಚ್ಚು ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಅನೇಕ ಜಿಲ್ಲೆಗಳಲ್ಲಿ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಎಲ್ಲೆಲ್ಲಿ ದಾಳಿ? ಯಾವೆಲ್ಲ ಅಧಿಕಾರಿಗಳು?
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಹಾಸನ, ಕಲಬುರಗಿ, ಚಿತ್ರದುರ್ಗ, ಉಡುಪಿ, ದಾವಣಗೆರೆ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಲೋಕಾಯುಕ್ತ ತಂಡಗಳು ಶೋಧ ಕಾರ್ಯವನ್ನು ಕೈಗೊಂಡಿವೆ.
ದಾಳಿಗೊಳಗಾದ ಪ್ರಮುಖ ಅಧಿಕಾರಿಗಳು ಮತ್ತು ಅವರ ಹುದ್ದೆಗಳ ವಿವರ ಇಂತಿದೆ:
ಜ್ಯೋತಿ ಮೇರಿ: ಪ್ರಥಮ ದರ್ಜೆ ಸಹಾಯಕರು (ಎಫ್ಡಿಎ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ. (ಇವರ ಮನೆಯಲ್ಲಿ ಬರೋಬ್ಬರಿ ₹2.17 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ)
ಧೂಳಪ್ಪ: ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಕಲಬುರಗಿ.
ಚಂದ್ರ ಕುಮಾರ್: ಸಹಾಯಕ ನಿರ್ದೇಶಕರು (ಎಡಿ), ಕೃಷಿ ಇಲಾಖೆ, ಚಿತ್ರದುರ್ಗ (ಹೊಳಲ್ಕೆರೆ).
ಲಕ್ಷ್ಮೀನಾರಾಯಣ ಪಿ. ನಾಯಕ್: ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ), ಉಡುಪಿ. (ಇವರ ಜೊತೆಗೆ ಬ್ರೋಕರ್ ಅಲೆವೂರಿನ ರವಿ ಸೇರಿಗಾರ್ ಮನೆ ಮೇಲೂ ದಾಳಿ)
ಮಂಜುನಾಥ್ ಜಿ.: ವೈದ್ಯಾಧಿಕಾರಿ, ಮಲ್ಲಸಂದ್ರ ಹೆರಿಗೆ ಆಸ್ಪತ್ರೆ, ಬೆಂಗಳೂರು ನಗರ.
ಜಗದೀಶ್ ನಾಯ್ಕ್: ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ), ಕೆಆರ್ಐಡಿಎಲ್, ದಾವಣಗೆರೆ. (ಇವರ ಶಿವಮೊಗ್ಗದ ಮನೆ ಮೇಲೂ ದಾಳಿ)
ಕೆ. ಗಂಗಾಮರಿ ಗೌಡ: ಸರ್ವೇಯರ್, ಬಿಎಂಆರ್ಸಿಎಲ್, ಬೆಂಗಳೂರು ನಗರ.
ದಾಳಿಯಲ್ಲಿ ಪತ್ತೆಯಾಗಿದ್ದೇನು?
ಲೋಕಾಯುಕ್ತದ ಹಲವು ತಂಡಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳಲ್ಲಿ ತೀವ್ರ ಶೋಧ ನಡೆಸಿದ್ದಾರೆ.
ಈ ವೇಳೆ ಹಲವರ ಮನೆಯಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ದಾಖಲೆಗಳು, ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ಐಷಾರಾಮಿ ವಾಹನಗಳ ದಾಖಲೆಗಳು ಪತ್ತೆಯಾಗಿವೆ.
ಹಾಸನದ ಎಫ್ಡಿಎ ಅಧಿಕಾರಿಯೊಬ್ಬರ ಮನೆಯಲ್ಲಿ ₹2.17 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವುದು ಅಧಿಕಾರಿಗಳಿಗೆ ಶಾಕ್ ನೀಡಿದೆ.
ತನಿಖೆ ಮುಂದುವರಿದಿದೆ
ಈ ಭ್ರಷ್ಟಾಚಾರದ ಕುರಿತು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.
ಲೋಕಾಯುಕ್ತದ ಈ ದಿಢೀರ್ ಕಾರ್ಯಾಚರಣೆಯಿಂದ ಸರ್ಕಾರಿ ವಲಯದಲ್ಲಿ ನಡುಕ ಉಂಟಾಗಿದೆ.

