
ಕುಂದಗೋಳ: ಬೆಣ್ಣೆಹಳ್ಳ ಪ್ರವಾಹದಿಂದ ನಿರಾಶ್ರಿತರಾಗಿರುವ ಕುಂದಗೋಳ ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬಗಳು, ಮನೆ ಮತ್ತು ಜಾಗೆ ಹಂಚಿಕೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಗುರುವಾರದಂದು ಯರಗುಪ್ಪಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮಹಾತ್ಮಾ ಗಾಂಧಿಜೀಯವರ ಪೋಟೋ ಇಟ್ಟು ಮತ್ತು ಪ್ರತಿಭಟನೆ ನಡೆಸಿದರು.
ಸುಮಾರು 15 ವರ್ಷಗಳ ಹಿಂದೆ ಬೆಣ್ಣೆಹಳ್ಳ ಪ್ರವಾಹದಿಂದ ಗ್ರಾಮವು ಸ್ಥಳಾಂತರಗೊಂಡಾಗ, ಅನೇಕ ಕುಟುಂಬಗಳು ತಮ್ಮ ಆಸ್ತಿ ಮತ್ತು ಮನೆಗಳನ್ನು ಕಳೆದುಕೊಂಡಿದ್ದವು. ಅಂದಿನಿಂದಲೂ ಈ 14 ಕುಟುಂಬಗಳು ಗುಡಿಸಲು ಮತ್ತು ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿವೆ. ಆ ಸಮಯದಲ್ಲಿ ಸರ್ಕಾರ 320 ಮನೆಗಳನ್ನು ನಿರ್ಮಿಸಲು ಮಂಜೂರು ಮಾಡಿತ್ತು ಮತ್ತು ಪಂಚಾಯಿತಿ ಮೂರು ಪಟ್ಟಿಗಳನ್ನು ಸಿದ್ಧಪಡಿಸಿತ್ತು.
ಪ್ರತಿಭಟನಾಕಾರರ ಪ್ರಕಾರ, ರಾಜಕೀಯ ಒತ್ತಡದಿಂದಾಗಿ ಮೊದಲ ಎರಡು ಪಟ್ಟಿಗಳಲ್ಲಿ ತಮ್ಮ ಹೆಸರುಗಳಿದ್ದರೂ, ಅವುಗಳನ್ನು ಮೂರನೇ ಪಟ್ಟಿಯಲ್ಲಿ ಕೈಬಿಡಲಾಗಿದೆ. ಇತ್ತೀಚೆಗೆ 320 ಮನೆಗಳ ಹಕ್ಕುಪತ್ರಗಳನ್ನು ವಿತರಿಸುವ ಪ್ರಕ್ರಿಯೆ ನಡೆದಾಗಲೂ ತಮ್ಮ ಹೆಸರುಗಳನ್ನು ಪರಿಗಣಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಇನ್ನೂ ಖಾಲಿ ಮನೆಗಳು ಮತ್ತು ಜಾಗೆಗಳು ಲಭ್ಯವಿದ್ದು, ತಮಗೆ ನಿವೇಶನ ಮತ್ತು ಮನೆಗಳನ್ನು ಮಂಜೂರು ಮಾಡಬೇಕು ಎಂದು ಈ ಕುಟುಂಬಗಳು ಒತ್ತಾಯಿಸಿವೆ. ಈ ಸಂಬಂಧ ಈ ಹಿಂದೆ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ತಾ.ಪಂ. ಇಒ ಜಗದೀಶ್ ಕಮ್ಮಾರ ಭರವಸೆ
ಯರಗುಪ್ಪಿ ಗ್ರಾ.ಪಂ. ಎದುರಿಗೆ ಇಂದು ನಿರಾಶ್ರಿತರು ಪ್ರತಿಭಟನೆ ನಡೆಸುತ್ತಿದ್ದಾಗ, ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಜಗದೀಶ್ ಕಮ್ಮಾರ ಅವರು ನಿರಾಶ್ರಿತರ ಬೇಡಿಕೆಯನ್ನು 15 ದಿನಗಳ ಒಳಗಾಗಿ ಗ್ರಾ.ಪಂ. ಪಿಡಿಒ ಹಾಗೂ ಅಧ್ಯಕ್ಷರು ಸರಿಪಡಿಸುತ್ತಾರೆ ಎಂದು ಭರವಸೆ ನೀಡಿದರು. ಈ ಭರವಸೆಯ ನಂತರ ಪ್ರತಿಭಟನಾಕಾರರು ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡರು.
ಪ್ರತಿಭಟನೆಯಲ್ಲಿ ಚಂದ್ರಶೇಖರ ಯಕ್ಕಣ್ಣವರ, ಮಂಜು ಬಾಲಣ್ಣವರ, ಮಂಜುನಾಥ ಕಂಪ್ಲಿ, ಬಸವರಾಜ ಹಡಪದ, ಮಾತೇಂಶ ಅಳಗವಾಡಿ, ಶಿವಾಜಿ ಆರೇರ್ ಸೇರಿದಂತೆ ಇತರರು ಇದ್ದರು.
ಪೋಟೋ: ಕೆ ಎನ್ ಡಿ02
ತಾಲ್ಲೂಕಿನಲ್ಲಿ ಯರಗುಪ್ಪಿ ಗ್ರಾಮ ಪಂಚಾಯತಿ ಎದುರಿಗೆ ಮುಳ್ಳೊಳ್ಳಿ ಗ್ರಾಮದ ಗ್ರಾಮಸ್ಥರು ಮನೆ ಮತ್ತು ಜಾಗೇ ನೀಡುವಂತೆ ಪ್ರತಿಭಟನೆ ನಡೆಸಿದರು.

