ಗಣೇಶ ಹಾಗೂ ಈದ್ ಮಿಲಾದ್‌ ಹಬ್ಬಗಳ ಆಚರಣೆ: ಡಿಜೆ ನಿಷೇಧಿಸಿ ಸಾಂಪ್ರದಾಯಿಕ ವಾದ್ಯ ಬಳಸಲು ಎಸ್‌ಪಿ ಸೂಚನೆ

Spread the love

ಧಾರವಾಡ: ಮುಂಬರುವ ಗೌರಿ-ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸುವ ಕುರಿತು ಗುರುವಾರದಂದು ನಗರದ ದುರ್ಗಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗುಂಜನ್ ಆರ್ಯ ಅವರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಡಿಜೆ ಸೌಂಡ್ ಸಿಸ್ಟಮ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಡಿಜೆ ಬಳಕೆಯಿಂದ ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರಿಗೆ ತೊಂದರೆಯಾಗುವ ಸಾಧ್ಯತೆಗಳಿದ್ದು, ಅದಕ್ಕೆ ಬದಲಾಗಿ ಸಾಂಪ್ರದಾಯಿಕ ಕಲೆ ಮತ್ತು ವಾದ್ಯಮೇಳಗಳನ್ನು ಬಳಸುವ ಮೂಲಕ ಹಬ್ಬಗಳನ್ನು ಆಚರಿಸಲು ಅವರು ಸಲಹೆ ನೀಡಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಮೆರವಣಿಗೆ ಮಾರ್ಗದ ಬಗ್ಗೆ ಮುಂಚಿತವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮಾರ್ಗ ಬದಲಾವಣೆಯಿದ್ದಲ್ಲಿ ಕೂಡಲೇ ತಿಳಿಸಬೇಕು. ಯಾವುದೇ ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಎರಡೂ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಸೂಚಿಸಿದರು.

ಅಗ್ನಿ ಅವಘಡಗಳನ್ನು ತಪ್ಪಿಸಲು ಗಣೇಶ ಮಂಟಪಗಳಲ್ಲಿ ಅಗ್ನಿಶಾಮಕ ಉಪಕರಣಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಅಲ್ಲದೆ, ಎಲ್ಲ ಗಣೇಶ ಮೂರ್ತಿಗಳ ವಿಸರ್ಜನೆಯು ರಾತ್ರಿ 10 ಗಂಟೆಯೊಳಗೆ ಪೂರ್ಣಗೊಳ್ಳಬೇಕು ಎಂದು ಎಸ್ಪಿ ಸ್ಪಷ್ಟಪಡಿಸಿದರು.
ಪ್ರತಿಷ್ಠಾಪನೆ ಸ್ಥಳ ಮತ್ತು ವಿಸರ್ಜನಾ ಮಾರ್ಗಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಆಯಾ ಮಂಡಳಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು. ಹಬ್ಬದ ಅವಧಿಯಲ್ಲಿ 24/7 ಇಬ್ಬರು ಸ್ವಯಂಸೇವಕರು ಗಣೇಶ ಮಂಟಪದ ಬಳಿ ಇರುವಂತೆ ನೋಡಿಕೊಳ್ಳಬೇಕು ಎಂದು ಎಸ್ಪಿ ಸೂಚನೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್ ಡಾ. ಡಿ.ಎಚ್. ಹೂಗಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *