

ಕುಂದಗೋಳ: ತಾಲೂಕಿನಲ್ಲಿ ಸುರಿದ ಅತಿಯಾದ ಮಳೆಯ ಅತಿವೃಷ್ಟಿಯಿಂದ ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗಿದ್ದು, ರೈತರಿಗೆ ಕೂಡಲೇ ಬೆಳೆ ಹಾನಿ ಪರಿಹಾರ ವಿತರಿಸಬೇಕು, ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಬೆಳೆ ವಿಮೆ ಮಂಜೂರು ಮಾಡಬೇಕೆಂದು ಆಗ್ರಹಿಸಿ ಕುಂದಗೋಳ ತಾಲೂಕಾ ಬೆಳೆ ರಕ್ಷಕ ರೈತರ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ನೇತೃತ್ವದಲ್ಲಿ ನೂರಾರು ರೈತರು ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಬುಧುವಾರದಂದು ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಅತಿಯಾದ ಮಳೆಯಿಂದಾಗಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಬೀಜ, ಗೊಬ್ಬರ, ಕ್ರಿಮಿನಾಶಕಗಳಿಗೆ ಅಪಾರ ಖರ್ಚು ಮಾಡಲಾಗಿದ್ದು, ಬೆಳೆ ಕೈಗೆ ಬಾರದೆ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದ್ದರಿಂದ, ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ರೈತರ ನೆರವಿಗೆ ಬರಬೇಕು ಎಂದು ರೈತ ಮುಂಖಡರಾದ ಹಾಗೂ ಸಂಘದ ಅಧ್ಯಕ್ಷರಾದ ಸೋಮರಾವ್ ದೇಸಾಯಿ ಸೇರಿದಂತೆ ಕುಂದಗೋಳ ಬೆಳೆ ರಕ್ಷಕ ಸಂಘ ಹಾಗೂ ರೈತ ಬಾಂಧವರು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರಾಜು ಮಾವರಕರ "ತಾಲೂಕಿನಲ್ಲಿ ವಾಡಿಕೆಗಿಂತ ಶೇ. 46 ರಷ್ಟು ಹೆಚ್ಚು ಮಳೆಯಾಗಿದ್ದು, ಪ್ರಾಥಮಿಕ ವರದಿ ಪ್ರಕಾರ ಅಂದಾಜು 15,000 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ, ಸರ್ಕಾರದ ಮಾರ್ಗಸೂಚಿಗಳ ಅನ್ವಯ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಬೆಳೆ ವಿಮೆ ನೋಂದಣಿ ಮಾಡಿಸಿದ ರೈತರು ಕೂಡಲೇ ದಾಖಲೆಗಳನ್ನು ಕೃಷಿ ಇಲಾಖೆಗೆ ಸಲ್ಲಿಸಬೇಕು," ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಸೋಮರಾವ್ ದೇಸಾಯಿ, ಮಹದೇವಪ್ಪ ಬೊಮ್ಮಸಮುದ್ರ, ಕಲ್ಲಪ್ಪಣ್ಣ ಉಗರಗೋಳ, ಎ. ಟಿ. ಹುಬ್ಬಳ್ಳಿ, ಪರಶುರಾಮ್ ಕಲಾಲ್, ಶಿವಕುಮಾರ್ ಸೊರಟೂರ, ಸುಭಾಸ್ ಸಾದರ, ಈಶ್ವರಯ್ಯ ಮನಕಟ್ಟಿಮಠ, ಬಸವರಾಜ್ ಅಲ್ಲಾಪುರ್, ಪ್ರವೀಣ್ ಬಡ್ನಿ, ಮಂಜುನಾಥ್ ಹಿರೇಮಠ್, ಲಕ್ಷ್ಮಣ್ ಚುಳುಕಿ, ವಿಠ್ಠಲ ಚವ್ಹಾಣ, ರಮೇಶ ಇಂಗಳಳ್ಳಿ, ಶಿವು ಪೂಜಾರ, ಅರ್ಜುನ ತಳವಾರ, ಮಂಜು ಗಿರಿಮಣ್ಣನವರ, ಅಜಪ್ಪ ಕಿರೇಸೂರ್, ಗುರಪ್ಪ ಅಲ್ಲಾಪುರ್, ಗಂಗಪ್ಪ ಕೊಡುವಕಲ್, ಟಾಕಣ್ಣ ಬಂಡಿವಾಡ ಇನ್ನೂ ಅನೇಕ ರೈತ ಬಾಂಧವರು ಉಪಸ್ಥಿತರಿದ್ದರು.

