

ಕಲಘಟಗಿ: ತಾಲೂಕಿನ ಬಸವ ತತ್ವ ಲಿಂಗಾನುಭಾವಿ ಶರಣರ ಬಳಗದ ಅನುಭವ ಮಂಟಪದಲ್ಲಿ ‘ವಚನ ಶ್ರಾವಣ’ದ ಅಂಗವಾಗಿ ‘ವಚನದರ್ಶನ’ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೊಸದುರ್ಗ ಬಸವಾಶ್ರಮದ ಪರಮಪೂಜ್ಯ ಅಕ್ಕಮಹಾದೇವಿ ಪೂಜ್ಯಮಾತಾಜಿ ಅವರು ಪ್ರವಚನ ನೀಡಿದರು.
ಪೂಜ್ಯಮಾತಾಜಿ ಅವರು ತಮ್ಮ ಪ್ರವಚನದಲ್ಲಿ, ಬಸವಾದಿ ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ಶರಣರು ನಮಗೆ ನೀಡಿದ ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳು ನಮ್ಮ ಜೀವನಕ್ಕೆ ಭದ್ರ ಬುನಾದಿಗಳಾಗಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ವಚನ ಗಾಯನವನ್ನು ನಡೆಸಲಾಯಿತು. ‘ಸೋಹಂ ಎಂದೆನಿಸದೆ ದಾಸೋಹಂ ಎಂದಿನಿಸಯ್ಯ ಗುರು ಬಸವಣ್ಣನವರ’ ವಚನದಂತೆ, ವಚನ ಶ್ರಾವಣದ ಅಂಗವಾಗಿ ಪ್ರಸಾದ ದಾಸೋಹವನ್ನು ಜಿಲ್ಲಾ ಪಂಚಾಯತ್ನ ನಿಕಟಪೂರ್ವ ಸದಸ್ಯರು ಹಾಗೂ ಕೆಎಂಎಫ್ನ ನಿಕಟಪೂರ್ವ ನಿರ್ದೇಶಕರಾದ ಯಲ್ಲಪ್ಪ ದಾಸನಕೊಪ್ಪ ಮತ್ತು ಅವರ ಕುಟುಂಬದವರು ಭಕ್ತಿಯಿಂದ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು, ಶರಣ ಶರಣೆಯರು ಮತ್ತು ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

