
ಆ.17ರಂದು ಪಕ್ಷದ ಹಿರಿಯರ ನೇತೃತ್ವದಲ್ಲಿ
ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ
ಗೊಂದಲಗಳಿಗೆ ಶೀಘ್ರವೇ ತೆರೆ ಬೀಳಬೇಕಿದೆ, ಸತ್ಯಾಸತ್ಯತೆ
ಬಹಿರಂಗವಾಗಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ
ಬೆಂಗಳೂರು: ಎಸ್ಐಟಿ ತನಿಖೆ ಶೀಘ್ರವಾಗಿ ಪೂರ್ಣಗೊಳ್ಳಬೇಕು ಎಂದು ಪ್ರಾರ್ಥಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷದ ಶಾಸಕರು ಮತ್ತು ಹಿರಿಯ ನಾಯಕರ ನಿಯೋಗ ಆಗಸ್ಟ್ 17ರಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ನಾವು ಪಕ್ಷದ ಕಾರ್ಯಕರ್ತರು ಎನ್ನುವುದಕ್ಕಿಂತ ಹೆಚ್ಚಾಗಿ ಶ್ರೀ ಮಂಜುನಾಥೇಶ್ವರನ ಭಕ್ತರಾಗಿ ದರ್ಶನ ಪಡೆಯಲು ತೆರಳುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿಯ ನಿಲುವು ಸ್ಪಷ್ಟವಾಗಿದೆ, ಎಸ್ಐಟಿ ತನಿಖೆ ಆದಷ್ಟು ಬೇಗ ಮುಗಿಯಬೇಕು. ಈ ವಿಚಾರವನ್ನು ಹೀಗೆ ಎಳೆದುಕೊಂಡು ಹೋಗಲು ಸಾಧ್ಯವಿಲ್ಲ, ಸತ್ಯಾಸತ್ಯತೆ ಬಹಿರಂಗವಾಗಬೇಕು,” ಎಂದು ವಿಜಯೇಂದ್ರ ಒತ್ತಾಯಿಸಿದರು.
ಈ ತನಿಖೆಯ ಹಿಂದೆ ಕೆಲವು ಸಮಾಜಘಾತುಕ ಶಕ್ತಿಗಳು, ಎಸ್ಡಿಪಿಐ ಮತ್ತು ಇತರ ಕುತಂತ್ರಗಳು ನಡೆಯುತ್ತಿವೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ. ಈ ಎಲ್ಲಾ ಗೊಂದಲಗಳಿಗೆ ಅತಿ ಶೀಘ್ರದಲ್ಲಿ ತೆರೆ ಬೀಳಬೇಕು ಎಂದು ವಿಜಯೇಂದ್ರ ಹೇಳಿದರು.
ನಾವು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

