

ಬೆಂಗಳೂರು:ಜೀವ ಉಳಿಸುವ ಪವಿತ್ರ ವೃತ್ತಿಯಲ್ಲಿದ್ದ ವೈದ್ಯ ದಂಪತಿಗಳ ನಡುವಿನ ದಾಂಪತ್ಯ ಕಲಹವು ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿವಾಹವಾದ ಕೇವಲ ಒಂದು ವರ್ಷದಲ್ಲಿಯೇ ಜನರಲ್ ಸರ್ಜನ್ ಆಗಿದ್ದ ಪತಿಯು, ಚರ್ಮರೋಗ ತಜ್ಞೆಯಾಗಿದ್ದ (Dermatologist) ತನ್ನ ಪತ್ನಿಯನ್ನು ಅರಿವಳಿಕೆ (Anaesthetic) ಔಷಧಿ ನೀಡಿ ಹತ್ಯೆ ಮಾಡಿದ್ದಾನೆ ಎಂಬ ಗಂಭೀರ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ಮೃತರನ್ನು ಡಾ. ಕೃತಿಕಾ ಎಂ. ರೆಡ್ಡಿ (28) ಮತ್ತು ಆರೋಪಿಯನ್ನು ಡಾ. ಮಹೇಂದ್ರ ರೆಡ್ಡಿ (31) ಎಂದು ಗುರುತಿಸಲಾಗಿದೆ. ಇಬ್ಬರೂ ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ ನಿರ್ವಹಿಸುತ್ತಿದ್ದರು. ಇವರಿಬ್ಬರ ವಿವಾಹವು ಮೇ 26, 2024 ರಂದು ನಡೆದಿತ್ತು. ಆದರೆ, ವೈವಾಹಿಕ ಜೀವನ ಸುಖಮಯವಾಗಿರಲಿಲ್ಲ ಎನ್ನಲಾಗಿದೆ. ವಿವಾಹದ ನಂತರ ಪತ್ನಿಗೆ ಆರೋಗ್ಯ ಸಮಸ್ಯೆಗಳಿದ್ದುದನ್ನು ಮರೆಮಾಚಲಾಗಿದೆ ಎಂಬ ಕಾರಣಕ್ಕೆ ಮಹೇಂದ್ರ ರೆಡ್ಡಿ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.
ಚಿಕಿತ್ಸೆಯ ನೆಪದಲ್ಲಿ ಕೊಲೆ?
ಕಳೆದ ಏಪ್ರಿಲ್ 23, 2025 ರಂದು, ಡಾ. ಕೃತಿಕಾ ಅವರು ಅನಾರೋಗ್ಯದ ಕಾರಣದಿಂದ ಮಾರತಹಳ್ಳಿಯಲ್ಲಿರುವ ತಮ್ಮ ತಂದೆಯ ಮನೆಯಲ್ಲಿ ತಂಗಿದ್ದರು. ಈ ವೇಳೆ ಪತಿ ಡಾ. ಮಹೇಂದ್ರ ರೆಡ್ಡಿ ಅಲ್ಲಿಗೆ ಭೇಟಿ ನೀಡಿ ಚಿಕಿತ್ಸೆಯ ನೆಪದಲ್ಲಿ ಅವರಿಗೆ ಎರಡು ದಿನಗಳ ಕಾಲ ರಕ್ತನಾಳದ ಮೂಲಕ (Intravenous) ಇಂಜೆಕ್ಷನ್‌ಗಳನ್ನು ನೀಡಿದ್ದಾನೆ. ಇಂಜೆಕ್ಷನ್ ನೀಡಿದ ನಂತರ ಏಪ್ರಿಲ್ 24ರಂದು ಕೃತಿಕಾ ಅವರು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ, ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಆರು ತಿಂಗಳ ನಂತರ ಬಯಲಾದ ಸತ್ಯ:
ಘಟನೆ ನಡೆದ ಬಳಿಕ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಮೃತರ ದೇಹದ ಆಂತರಿಕ ಅಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿತ್ತು. ಸುಮಾರು ಆರು ತಿಂಗಳ ನಂತರ ಬಂದ ಎಫ್‌ಎಸ್‌ಎಲ್ ವರದಿಯಲ್ಲಿ, ಡಾ. ಕೃತಿಕಾ ಅವರ ದೇಹದಲ್ಲಿ ಪ್ರೊಪೊಫಾಲ್ (Propofol) ಎಂಬ ಅರಿವಳಿಕೆ ಔಷಧಿಯು ವಿಷಕಾರಿ ಪ್ರಮಾಣದಲ್ಲಿ ಪತ್ತೆಯಾಗಿದೆ. ಈ ಔಷಧಿ ಸಾಮಾನ್ಯವಾಗಿ ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಮಾತ್ರ ಬಳಸಲ್ಪಡುವ ನಿಯಂತ್ರಿತ ವಸ್ತುವಾಗಿದೆ. ಇದರಿಂದಾಗಿ, ಕೃತಿಕಾ ಅವರ ಸಾವು ಸಹಜವಲ್ಲ, ಬದಲಿಗೆ ಅರಿವಳಿಕೆ ಔಷಧಿಯ ಓವರ್‌ಡೋಸ್‌ನಿಂದ ಸಂಭವಿಸಿದೆ ಎಂದು ದೃಢಪಟ್ಟಿತು.
ಎಫ್‌ಐಆರ್ ದಾಖಲು ಮತ್ತು ಬಂಧನ:
ಎಫ್‌ಎಸ್‌ಎಲ್ ವರದಿ ಬಂದ ನಂತರ, ಅಕ್ಟೋಬರ್ 14 ರಂದು ಡಾ. ಕೃತಿಕಾ ಅವರ ತಂದೆ ಮುನಿ ರೆಡ್ಡಿ ಅವರು ತಮ್ಮ ಅಳಿಯನ ವಿರುದ್ಧ ಕೊಲೆ ಆರೋಪದಡಿ ಮಾರುತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ದೂರಿನ ಆಧಾರದ ಮೇಲೆ, ಪೊಲೀಸರು ಕೂಡಲೇ ಪ್ರಕರಣವನ್ನು ಕೊಲೆಯೆಂದು ಪರಿಗಣಿಸಿ (ಭಾರತೀಯ ನ್ಯಾಯ ಸಂಹಿತೆ 103ರ ಅಡಿಯಲ್ಲಿ) ತನಿಖೆ ತೀವ್ರಗೊಳಿಸಿ, ಉಡುಪಿಯ ಮಣಿಪಾಲದಲ್ಲಿ ತಲೆಮರೆಸಿಕೊಂಡಿದ್ದ ಡಾ. ಮಹೇಂದ್ರ ರೆಡ್ಡಿ ಅವರನ್ನು ಬಂಧಿಸಿದ್ದಾರೆ.
ಡಾ. ಮಹೇಂದ್ರ ರೆಡ್ಡಿ ಅವರು ತಮ್ಮ ವೈದ್ಯಕೀಯ ಜ್ಞಾನ ಮತ್ತು ಶಸ್ತ್ರಚಿಕಿತ್ಸಾ ಕೊಠಡಿ (OT) ಹಾಗೂ ಐಸಿಯು ಡ್ರಗ್ಸ್‌ಗಳ ಲಭ್ಯತೆಯನ್ನು ದುರುಪಯೋಗಪಡಿಸಿಕೊಂಡು ಕೊಲೆಯನ್ನು ಎಸಗಿದ್ದಾರೆ. ಇದನ್ನು ಸಹಜ ಸಾವು ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇವಲ ಒಂದು ವರ್ಷದ ದಾಂಪತ್ಯ ಜೀವನದಲ್ಲಿ ಈ ದುರಂತ ಸಂಭವಿಸಿರುವುದು ವೈದ್ಯಕೀಯ ಲೋಕದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

