
ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಲು ಸ್ವಂತ ಖರ್ಚಿನಲ್ಲಿ ವಿವಾಹ ಮಾಡುತ್ತೇನೆ; ಹಿಂದೂ ಸಂಘಟನೆಗಳ ವಿರುದ್ಧ ಆಕ್ರೋಶ
ಮಂಗಳೂರು: ಪುತ್ತೂರಿನಲ್ಲಿ ಅವಿವಾಹಿತ ಯುವತಿಗೆ ಜನಿಸಿದ ಮಗು ಸ್ಥಳೀಯ ನಿವಾಸಿ ಕೃಷ್ಣ ರಾವ್ ಎಂಬಾತನದ್ದೇ ಎಂದು ಡಿಎನ್‌ಎ ಪರೀಕ್ಷೆಯಲ್ಲಿ ರುಜುವಾತಾಗಿರುವ ಹಿನ್ನೆಲೆಯಲ್ಲಿ, ಆತ ಮಗುವಿನ ತಾಯಿಯನ್ನು ಕೂಡಲೇ ವಿವಾಹವಾಗಬೇಕು. ತಪ್ಪಿದಲ್ಲಿ, ಆತನ ಮನೆಯಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನ್ಯಾಯಕ್ಕಾಗಿ ಧರಣಿ ನಡೆಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷ್ಣ ರಾವ್ ಒಪ್ಪಿದಲ್ಲಿ ಆತನ ಜೊತೆ ಯುವತಿಯ ವಿವಾಹವನ್ನು ನಾನೇ ಸ್ವಂತ ಖರ್ಚಿನಲ್ಲಿ ಮಾಡಿಸುತ್ತೇನೆ ಎಂದು ಘೋಷಿಸಿದರು.
ಪ್ರೀತಿಯ ಹೆಸರಲ್ಲಿ ಕೈಬಿಡುವವರಿಗೆ ಪಾಠವಾಗಬೇಕು
”ಪ್ರೀತಿ, ಪ್ರೇಮದ ಹೆಸರಲ್ಲಿ ಲೈಂಗಿಕ ಚಟುವಟಿಕೆ ನಡೆಸಿ, ಬಳಿಕ ಅರ್ಧದಲ್ಲೇ ಕೈಬಿಡುವ ಘಟನೆಗಳು ಮರುಕಳಿಸಬಾರದು. ಇದೊಂದು ಜಿಲ್ಲೆಗೆ ಕಪ್ಪು ಚುಕ್ಕೆ. ಈ ಘಟನೆ ಪ್ರೀತಿಸಿ, ಮಗು ಕರುಣಿಸಿ ಯುವತಿಯ ಬಾಳನ್ನು ಅರ್ಧಕ್ಕೇ ಕೈಬಿಡುವವರಿಗೆ ಒಂದು ಪಾಠವಾಗಬೇಕು” ಎಂದು ಪ್ರತಿಭಾ ಕುಳಾಯಿ ಹೇಳಿದರು.
ಯುವತಿ ಜೊತೆ ಎಂಟು ವರ್ಷಗಳಿಂದ ಸಂಪರ್ಕದಲ್ಲಿದ್ದ ಕೃಷ್ಣ ರಾವ್, ಕೊನೆಗೆ ವಿವಾಹವಾಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆ. ಆತನ ಮನೆಯವರೂ ಈಗ ಅವರ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಇಂತಹ ಘಟನೆಗಳು ಸಮಾಜದಲ್ಲಿ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಿಂದೂ ಸಂಘಟನೆಗಳ ವಿರುದ್ಧ ಆಕ್ರೋಶ
ಈ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಕೊಡಿಸುವಲ್ಲಿ ಹಿಂದುತ್ವ ಸಂಘಟನೆಗಳು, ಸ್ವಯಂಘೋಷಿತ ಮುಖಂಡರು ಕೈಚೆಲ್ಲುತ್ತಿರುವುದು ಸರಿಯಲ್ಲ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದರು. “ಹಿಂದೂಗಳು ಹತ್ತು ಹತ್ತು ಮಕ್ಕಳನ್ನು ಹೆರುವಂತೆ ಭಾಷಣ ಮಾಡುವ ಹಿಂದುತ್ವ ಮುಖಂಡರು, ಇದೀಗ ಹಿಂದೂ ಯುವಕನೊಬ್ಬ ಹಿಂದೂ ಯುವತಿಗೆ ಮಗು ಕರುಣಿಸಿದ ಪ್ರಕರಣದಲ್ಲಿ ಮಾತನಾಡುತ್ತಿಲ್ಲ. ಅನ್ಯಾಯಕ್ಕೊಳಗಾದ ಯುವತಿಗೆ ನ್ಯಾಯ ದೊರಕಿಸುತ್ತಿಲ್ಲ” ಎಂದು ದೂರಿದರು.
ಸಂತ್ರಸ್ತೆಗೆ ನ್ಯಾಯ ದೊರಕಿಸಲು ಸಮುದಾಯದ ಸಂಘಟನೆಗಳು ಕೈಬಿಟ್ಟಿದ್ದರೂ, ಕೇವಲ ಸಮುದಾಯದ ಮುಖಂಡ ನಂಜುಂಡಿ ಮಾತ್ರ ಧೈರ್ಯ ತುಂಬಿ ಬೆಂಬಲಕ್ಕೆ ನಿಂತಿದ್ದಾರೆ. ಯಾವುದೇ ತಪ್ಪು ಮಾಡದ ಆ ಮಗುವಿನ ಭವಿಷ್ಯದ ಬಗ್ಗೆ ಎಲ್ಲರೂ ಆಲೋಚಿಸಬೇಕು ಎಂದು ಅವರು ಆಗ್ರಹಿಸಿದರು.
ಸದ್ಯ ಜಾಮೀನಿನಲ್ಲಿರುವ ಕೃಷ್ಣ ರಾವ್ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ನೀಡುವ ಹೇಳಿಕೆಯನ್ನು ಆಧರಿಸಿ ಮುಂದೆ ಹೋರಾಟದ ರೂಪುರೇಷೆ ಹಾಕಿಕೊಳ್ಳಲಾಗುವುದು. ಸಂತ್ರಸ್ತೆಗೆ ನ್ಯಾಯ ಕೊಡಿಸಿಯೇ ಸಿದ್ಧ ಎಂದು ಪ್ರತಿಭಾ ಕುಳಾಯಿ ಇದೇ ವೇಳೆ ಪುನರುಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತೆಯ ತಾಯಿ ನಮಿತಾ ಮತ್ತು ಸಮುದಾಯದ ಕಾರ್ಯಕರ್ತೆ ಅರ್ಚನಾ ಉಪಸ್ಥಿತರಿದ್ದರು

