ಕ್ರೀಡಾಂಗಣದಲ್ಲಿ ಪಾಕ್‌ನೊಂದಿಗೆ ದೂರ: ಮಹಿಳಾ ವಿಶ್ವಕಪ್‌ನಲ್ಲೂ ಹಸ್ತಲಾಘವ ನಿರಾಕರಿಸಿದ ಹರ್ಮನ್‌ಪ್ರೀತ್ ಕೌರ್!

Spread the love

ಲಂಡನ್: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಹಸ್ತಲಾಘವ ನಿರಾಕರಣೆಯ ನಿಲುವು ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂದುವರೆದಿದ್ದು, ಇದೀಗ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಅದೇ ಸಂಪ್ರದಾಯವನ್ನು ಭಾರತೀಯ ಮಹಿಳಾ ತಂಡ ಅನುಸರಿಸಿದೆ.

ಆಪರೇಷನ್ ಸಿಂಧೂರದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಈ ಹಿಂದೆ ನಡೆದ ಪುರುಷರ ಏಷ್ಯಾ ಕಪ್ ಟೂರ್ನಿಯ ವೇಳೆ ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು. ಈ ನಿಲುವಿಗೆ ಕ್ರಿಕೆಟ್ ಅಂಗಳದಲ್ಲಿ ಪರ ಮತ್ತು ವಿರೋಧ ಅಭಿಪ್ರಾಯಗಳು ಕೇಳಿಬಂದಿದ್ದವು.

​ಇದೀಗ ಅದೇ ಸಿದ್ಧಾಂತವನ್ನು ಭಾರತದ ಮಹಿಳಾ ತಂಡವೂ ಪಾಲಿಸಿದೆ. ಪಾಕಿಸ್ತಾನದ ವಿರುದ್ಧ ನಡೆದ ಟಾಸ್ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಪಾಕ್ ನಾಯಕಿ ಫಾತಿಮಾ ಸನಾ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ. ಟಾಸ್ ಪ್ರಕ್ರಿಯೆಯ ಸಮಯದಲ್ಲಿ ಎರಡೂ ತಂಡಗಳ ನಾಯಕಿಯರು ಪರಸ್ಪರ ಅಂತರ ಕಾಯ್ದುಕೊಂಡಿದ್ದರು.

​ಬಿಸಿಸಿಐನಿಂದಲೇ ಸೂಚನೆ:

​ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರ್ತಿಯರೊಂದಿಗೆ ಮೈದಾನದಲ್ಲಿ ಹಸ್ತಲಾಘವ ಮಾಡದಿರುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯೇ ಭಾರತ ಮಹಿಳಾ ತಂಡಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು ಎಂದು ತಿಳಿದುಬಂದಿದೆ. ಕ್ರೀಡೆಯ ಹೊರತಾದ ರಾಜತಾಂತ್ರಿಕ ಸಂಬಂಧಗಳ ಪ್ರಭಾವವು ಕ್ರೀಡಾಂಗಣದ ಮೇಲೂ ಬಲವಾಗಿ ಮುಂದುವರಿದಿರುವುದನ್ನು ಈ ಘಟನೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *