

ಧರ್ಮಸ್ಥಳದ ಘನತೆಗೆ ಕುಂದು ತರುವ ಪ್ರಯತ್ನ ಖಂಡನೀಯ: ಗುರು ಪಾಟೀಲ
ಹುಬ್ಬಳ್ಳಿ: ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಗಳ ಘನತೆಗೆ ಧಕ್ಕೆ ತರುವ ಪ್ರಯತ್ನಗಳು ಖಂಡನೀಯ ಎಂದು ಜಿಲ್ಲಾ ಬಿಜೆಪಿ ವಕ್ತಾರ ಗುರು ಪಾಟೀಲ ಅವರು ಹೇಳಿದ್ದಾರೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಕುರಿತು ರಾಜ್ಯ ಸರ್ಕಾರವು ಕೂಡಲೇ ಪಾರದರ್ಶಕ ಮತ್ತು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅವರು ಮಂಗಳವಾದಂದು ಪತ್ರಿಕಾ ಪ್ರಕಟಣೆ ಮೂಲಕ ಈ ವಿಷಯ ತಿಳಿಸಿರುವ ಅವರು, ಎಸ್ಐಟಿ ತನಿಖೆಯನ್ನು ಸ್ವಾಗತಿಸುವುದಾಗಿ ಹೇಳಿದ್ದು, ಆದರೆ ತನಿಖೆಯ ದಿಕ್ಕು ತಪ್ಪುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ 13 ಸ್ಥಳಗಳ ಬಗ್ಗೆ ಹೇಳಿದ್ದ ಅನಾಮಿಕ ವ್ಯಕ್ತಿ ಈಗ 18 ಸ್ಥಳಗಳ ಬಗ್ಗೆ ಹೇಳುತ್ತಿದ್ದು, ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಲು ಎಸ್ಐಟಿಯನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಅನಾಮಿಕ ವ್ಯಕ್ತಿಯ ಹಿನ್ನೆಲೆ ಬಹಿರಂಗಪಡಿಸಲು ಆಗ್ರಹ
ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿರುವ ಈ ಅನಾಮಿಕ ವ್ಯಕ್ತಿಯ ಹಿನ್ನೆಲೆಯನ್ನು ಬಹಿರಂಗಪಡಿಸಬೇಕು ಎಂದು ಗುರು ಪಾಟೀಲ ಒತ್ತಾಯಿಸಿದ್ದಾರೆ. ಕಳೆದ 15 ವರ್ಷಗಳಿಂದ ಆತ ಎಲ್ಲಿದ್ದ ಮತ್ತು ಏನು ಮಾಡುತ್ತಿದ್ದ, ಅವನ ಹಿಂದಿರುವವರು ಯಾರು ಎಂಬುದನ್ನು ಸರ್ಕಾರ ಮತ್ತು ಎಸ್ಐಟಿ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಧರ್ಮಸ್ಥಳ ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ, ಇದು ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಧಾರ್ಮಿಕ ಚಟುವಟಿಕೆಗಳ ಜೊತೆಗೆ, ಸಾವಿರಾರು ದೇವಾಲಯಗಳ ಜೀರ್ಣೋದ್ಧಾರ, ಕೆರೆಗಳ ಪುನಶ್ಚೇತನ, ವ್ಯಸನಮುಕ್ತಿ ಅಭಿಯಾನ ಹಾಗೂ ಸ್ವಸಹಾಯ ಸಂಘಗಳ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆಗಳನ್ನು ನೀಡಿದೆ ಎಂಬುದನ್ನು ಮರೆಯಬಾರದು ಎಂದು ಅವರು ತಿಳಿಸಿದ್ದಾರೆ.
ಹೊಟ್ಟೆಕಿಚ್ಚಿನಿಂದ ಆರೋಪ:
ಧರ್ಮಾಧಿಕಾರಿ ಹೆಗ್ಗಡೆಯವರ ಸಮಾಜಮುಖಿ ಕಾರ್ಯಗಳನ್ನು ಸಹಿಸಲಾಗದೆ ಕೆಲವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಎಡಪಂಥೀಯರ ನಿದ್ದೆಗೆಡಿಸಿರುವ ಅವರ ಜನಪರ ಕಾರ್ಯಗಳು ಕೆಲವರಿಗೆ ಹೊಟ್ಟೆಕಿಚ್ಚು ತಂದಿದೆ. ಸನಾತನ ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಈ ಷಡ್ಯಂತ್ರಗಳನ್ನು ಖಂಡಿಸಬೇಕು. ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಗುರು ಪಾಟೀಲ ಎಚ್ಚರಿಕೆ ನೀಡಿದ್ದಾರೆ.

