ನವಲಗುಂದದಲ್ಲಿ ಗಣೇಶ ಹಬ್ಬದ ಡಿಜೆ: ನಿಯಮ ಸಡಿಲಿಸದಿದ್ದರೆ ಬಿಜೆಪಿ ಯುವ ಮೋರ್ಚಾದಿಂದ ಉಗ್ರ ಪ್ರತಿಭಟನೆ ಎಚ್ಚರಿಕೆ, ಬಿಜೆಪಿ ನವಲಗುಂದ ಮಂಡಳದ ಯುವ ಮೊರ್ಚಾ ಅಧ್ಯಕ್ಷ ಅರುಣಕುಮಾರ ಮೆಣಸಿನಕಾಯಿ

Spread the love

ನವಲಗುಂದ: ಗಣೇಶ ಹಬ್ಬದ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಡಿಜೆ ಸೌಂಡ್ ಬಳಸಲು ಸರ್ಕಾರ ಮತ್ತು ಸ್ಥಳೀಯ ಆಡಳಿತವು ಅವಕಾಶ ನೀಡಬೇಕು. ಇಲ್ಲವಾದಲ್ಲಿ, ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಯುವ ಮೋರ್ಚಾ ನವಲಗುಂದ ಮಂಡಲದ ಅಧ್ಯಕ್ಷ ಅರುಣಕುಮಾರ್ ಚ. ಮೆಣಸಿನಕಾಯಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, “ಗಣೇಶ ಹಬ್ಬವು ಹಿಂದೂಗಳ ಪಾಲಿಗೆ ಅತ್ಯಂತ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಇದನ್ನು ಪ್ರತಿ ವರ್ಷವೂ ಅತ್ಯಂತ ಸಡಗರ ಮತ್ತು ವಿಜೃಂಭಣೆಯಿಂದ ಸಾರ್ವಜನಿಕವಾಗಿ ಆಚರಿಸಲಾಗುತ್ತದೆ. ಈ ಹಬ್ಬದ ವೈಶಿಷ್ಟ್ಯವೆಂದರೆ, ಯುವಕರು ಮತ್ತು ಸಂಘ-ಸಂಸ್ಥೆಗಳು ಡಿಜೆ ಸೌಂಡ್ ಬಳಸಿ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಸಂಭ್ರಮವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದ್ದರಿಂದ, ಗಣೇಶ ಮಂಡಳಿಗಳಿಗೆ ಮೂರ್ತಿ ಪ್ರತಿಷ್ಠಾಪಿಸಲು ಮತ್ತು ಡಿಜೆ ಬಳಸಲು ಯಾವುದೇ ರೀತಿಯ ಅನಗತ್ಯ ತೊಂದರೆಗಳನ್ನು ಅಥವಾ ಕಟ್ಟುನಿಟ್ಟಿನ ನಿಯಮಗಳನ್ನು ಹೇರಬಾರದು” ಎಂದು ಆಗ್ರಹಿಸಿದರು.

ಸರ್ಕಾರ ಹಾಗೂ ಸ್ಥಳೀಯ ಆಡಳಿತವು ಗಣೇಶ ಮಂಡಳಿಗಳ ಮೇಲೆ ಹೇರಿರುವ ನಿಯಮ ಮತ್ತು ನಿಬಂಧನೆಗಳನ್ನು ಕೂಡಲೇ ಸಡಿಲಿಸಬೇಕು. ಕೇವಲ ನಿಯಮಗಳನ್ನು ಮುಂದಿಟ್ಟುಕೊಂಡು ಹಬ್ಬದ ಸಂಭ್ರಮಕ್ಕೆ ಅಡ್ಡಿಪಡಿಸಬಾರದು. ಒಂದು ವೇಳೆ ಸರ್ಕಾರವು ಈ ಮನವಿಗೆ ಸ್ಪಂದಿಸದೆ ಹೋದರೆ ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸಲು ವಿಫಲವಾದರೆ, ಮುಂಬರುವ ದಿನಗಳಲ್ಲಿ ಬಿಜೆಪಿ ಯುವ ಮೋರ್ಚಾದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ಅರುಣಕುಮಾರ್ ಮೆಣಸಿನಕಾಯಿ ತಿಳಿಸಿದರು.

Leave a Reply

Your email address will not be published. Required fields are marked *